ಕೋರಂ ಅಭಾವ: ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಮುಂದಕ್ಕೆ
ಪಿರಿಯಾಪಟ್ಟಣ: ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಕೋರಂ ಅಭಾವದಿಂದ ಮುಂದೂಡಲ್ಪಟ್ಟ ಘಟನೆ ಸೋಮವಾರ ಜರುಗಿತು.
ತಾಲೂಕು ಪಂಚಾಯಿತಿ 3ನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದ ಸಾಮಾನ್ಯ ಮಹಿಳೆ ಬದಲಾಗಿ ಹಿಂದುಳಿದ ವರ್ಗ ಮಹಿಳೆಗೆ, ಉಪಾಧ್ಯಕ್ಷ ಅನುಸೂಚಿತ ಜಾತಿಗೆ ಮೀಸಲು ಪ್ರಕಟಿಸಿ, ಜು.21ಕ್ಕೆ ಚುನಾವಣೆ ದಿನಾಂಕ ನಿಗದಿಪಡಿಸಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಸರಸ್ವತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ರುದ್ರಮ್ಮ ನಾಗಯ್ಯ ನಾಮಪತ್ರ ಸಲ್ಲಿಸಿದ್ದರು. ಪ್ರಸ್ತುತ ತಾಲೂಕು ಪಂಚಾಯತಿಯಲ್ಲಿ ಜೆಡಿಎಸ್ ಪಕ್ಷದ 13 ಮಂದಿ ಮತ್ತು ಕಾಂಗ್ರೆಸ್ ಪಕ್ಷದ 7 ಸದಸ್ಯರಿದ್ದರೂ ಅಧ್ಯಕ್ಷ ಸ್ಥಾನದ ಮೀಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಕೊನೆಯ ದಿನಗಳಲ್ಲಿ ಬದಲಾವಣೆಯಾದದ್ದನ್ನು ವಿರೋಧಿಸಿ, ಜೆಡಿಎಸ್‌ನ 12 ಸದಸ್ಯರು ಗೈರು ಹಾಜರಾದ ಪ್ರಯುಕ್ತ ಸಭೆ ನಡೆಸಲು 11 ಸದಸ್ಯರ ಅಗತ್ಯವಿದ್ದು 8 ಮಂದಿ ಮಾತ್ರ ಇದ್ದು ಕೋರಂ ಸಂಖ್ಯೆ ಕೊರತೆಯಿಂದಾಗಿ ಚುನಾವಣೆಯನ್ನು ಜು.31ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ಜಗದೀಶ್ ಘೋಸಿದರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿ ಸರಸ್ವತಿ ಮಾತನಾಡಿ, ಹೈಕೋರ್ಟ್‌ನಿಂದಲೂ ಜೆಡಿಎಸ್ ಸದಸ್ಯರ ಮೀಸಲು ಆಕ್ಷೇಪದ ಅರ್ಜಿ ತಿರಸ್ಕೃತಗೊಂಡಿದೆ. ಜೆಡಿಎಸ್ ಸದಸ್ಯರು ಚುನಾವಣೆಗೆ ಗೈರು ಹಾಜರಾಗುವ ಮೂಲಕ ತಾಲೂಕಿನ ಅಭಿವೃದ್ದಿ ಕೆಲಸಗಳ ಹಿನ್ನಡೆಗೆ ಕಾರಣರಾಗಿದ್ದಾರೆ ಎಂದರು.
ಬಿ.ವಿ. ಅನಿತಾ, ಆರ್.ಸಿ. ಚಂದ್ರು, ಸಾಕಮ್ಮ, ಮಹದೇವ್, ಸುಪ್ರಭಾ, ಎಪಿಎಂಸಿ ಅಧ್ಯಕ್ಷ ಕೆ. ಹೊಲದಪ್ಪ, ಲಕ್ಷ್ಮೇಗೌಡ ಇದ್ದರು.