ಮಳಿಗೆ ಮಾಹಿತಿ ನೀಡದ ಮುಖ್ಯಾಧಿಕಾರಿ
ಟಿ. ನರಸೀಪುರ: ಆಡಳಿತಾಧಿಕಾರಿಗಳ ಅವಧಿಯಲ್ಲಿ ಹಂಚಿಕೆ ಮಾಡಲಾಗಿದ್ದ ವಾಣಿಜ್ಯ ಮಳಿಗೆಗಳ ಮಾಹಿತಿಯನ್ನು ಮುಖ್ಯಾಧಿಕಾರಿ ನೀಡದ್ದಕ್ಕೆ ಸಾಮಾನ್ಯ ಸಭೆಯನ್ನೇ ಮುಂದೂಡಿದ ಘಟನೆ ಟಿ.ನರಸೀಪುರ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ನಡೆಯಿತು.
ವಾಣಿಜ್ಯ ಮಳಿಗೆಗಳ ಹಂಚಿಕೆ ಬಗ್ಗೆ ಅಧ್ಯಕ್ಷರು ಸೇರಿದಂತೆ ನಾಲ್ವರು ಸದಸ್ಯರು ಏರು ಧ್ವನಿಯಲ್ಲಿಯೇ ಮುಖ್ಯಾಧಿಕಾರಿ ವಿ.ಟಿ.ವಿಲ್ಸನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ, ಹಂಚಿಕೆ ಪ್ರಕ್ರಿಯೆ ಮಾಹಿತಿಯನ್ನು ಕೊಟ್ಟು ಸಭೆಯ ಮುಂದಿನ ವಿಚಾರವನ್ನು ಪ್ರಸ್ತಾಪಿಸುವಂತೆ ಪಟ್ಟು ಹಿಡಿದರು.
ಮಳಿಗೆಗಳ ಮಾಹಿತಿಯೇ ಸಭೆಯುದ್ದಕ್ಕೂ ಮಾರ್ದನಿಸಿದ್ದರಿಂದ ಮತ್ತಾವುದೇ ನಿರ್ಣಯವಾಗಲಿ, ಚರ್ಚೆಯಾಗಲಿ ನಡೆಯಲಿಲ್ಲ. ಮುಖ್ಯಾಧಿಕಾರಿ ವಿಲ್ಸನ್ ವಿರುದ್ಧ ಸದಸ್ಯರಾದ ಎಂ.ಮಹದೇವಸ್ವಾಮಿ, ಎಂ. ರಾಘವೇಂದ್ರ ಮತ್ತು ಮಲ್ಲೇಶ್ ಅವರು ವಾಗ್ದಾಳಿ ನಡೆಸಿ ತರಾಟೆಗೆ ತೆಗೆದುಕೊಂಡರಲ್ಲದೆ ಸಭೆ ರದ್ದುಗೊಳಿಸಿ, ಕಚೇರಿಗೆ ಬೀಗ ಹಾಕುವ ಬೆದರಿಕೆ ಹಾಕಿ, ಸಭೆಯಿಂದ ನಿರ್ಗಮಿಸುತ್ತಿದ್ದ ಅವರನ್ನು ಜೆಇ ಪುರುಷೋತ್ತಮ ಸಮಾಧಾನಪಡಿಸಿದರು.
ಲಾಟರಿ ಮೂಲಕ ಆಯ್ಕೆ: ಮುಖ್ಯಾಧಿಕಾರಿ ವಿ.ಟಿ.ವಿಲ್ಸನ್ ಮಾತನಾಡಿ, ನ್ಯಾಯಾಲಯದಲ್ಲಿರುವ ಮಳಿಗೆಗಳನ್ನು ಬಿಟ್ಟು, ಇನ್ನುಳಿದ ಎಲ್ಲ ಮಳಿಗೆಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಮೀಸಲಾತಿ ಮಳಿಗೆಗಳನ್ನು ಅರ್ಹ ದಲಿತರಿಗೆ ನೀಡಲಾಗಿದೆ. ಹಂಚಿಕೆ ಪ್ರಕ್ರಿಯೆ ರದ್ದುಗೊಳಿಸುವ ನಿರ್ಣಯ ಕೈಗೊಳ್ಳುವ ಅಧಿಕಾರ ಸದಸ್ಯರಿಗಿದೆ. ಸಭೆಯಲ್ಲಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕೆಂದು ತಿಳಿಸಿದ್ದಕ್ಕೆ ಸದಸ್ಯರು ನಿರ್ಣಯ ಕೈಗೊಳ್ಳಲು ನಿರಾಕರಿಸಿದರು.
ಮುಖ್ಯಾಧಿಕಾರಿಗಳ ನೀಡಿದ ಉತ್ತರಕ್ಕೆ ತೃಪ್ತರಾಗದ ಅಧ್ಯಕ್ಷೆ ರತ್ನಮ್ಮ ಲಿಂಗಣ್ಣ ಅವರು, ಸದಸ್ಯ ಮಲ್ಲೇಶ್ ಸಲಹೆಯಂತೆ ಸದಸ್ಯರಿಗೆ ಯಾವುದೇ ಸಭಾ ಸೂಚನಾ ಪತ್ರವಿಲ್ಲದೆ ಎರಡು ದಿನಗಳ ನಂತರ ಸಭೆ ನಡೆಸಲಾಗುವುದು. ಮುಖ್ಯಾಧಿಕಾರಿಗಳು ವಾಣಿಜ್ಯ ಮಳಿಗೆಗಳ ಹಂಚಿಕೆ ಪ್ರಕ್ರಿಯೆಯ ಮಾಹಿತಿ ತರಬೇಕು ಎಂಬ ನಿರ್ಣಯ ಪ್ರಕಟಿಸಿ, ಸಭೆ ಮುಂದೂಡಿದರು.
ಸಭೆಯ ಆರಂಭದಲ್ಲಿ ಮಾಜಿ ಅಧ್ಯಕ್ಷ ಎಸ್.ರಾಜಶೇಖರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪಪಂ ಅನ್ನು ಸಚಿವ ಸಂಪುಟ ಸಭೆಯಲ್ಲಿ ಪುರಸಭೆಯಾಗಿ ಪರಿವರ್ತಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ರೋಟರಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸದಸ್ಯ ಟಿ.ಜಿ. ಪುಟ್ಟಸ್ವಾಮಿ ಅವರನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಶ್ರುತಿ ಮಣಿಕಂಠ, ಸದಸ್ಯರಾದ ಸುಧಾ, ರಾಜಮ್ಮ, ಶಶಿಕಲಾ, ಮೀನಾಕ್ಷಿ, ಸಿ. ಉಮೇಶ್, ಟಿ.ಜಿ. ಪುಟ್ಟಸ್ವಾಮಿ, ಯೋಜನಾಧಿಕಾರಿ ಕೆಂಪರಾಜು, ಸಹಾಯಕ ಲೆಕ್ಕಾಧಿಕಾರಿ ವಿನಯ್ ಇದ್ದರು.