ಸಂಕೋಚ ಬಿಟ್ಟು ತಜ್ಞರ ಜೊತೆ ಸಮಾಲೋಚಿಸಿ
ಹುಣಸೂರು: ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನ ಸಮಸ್ಯೆಗಳನ್ನು ಸಂಕೋಚ ಬಿಟ್ಟು ತಜ್ಞರ ಜೊತೆ ಸಮಾಲೋಚಿಸಿ, ನಿಭಾಯಿಸುವ ಕ್ರಿಯಾಶೀಲ ಗುಣ ಬೆಳೆಸಿಕೊಂಡಾಗ ಮಾತ್ರ ದೇಶದ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಸ್ತ್ರೀರೋಗ ತಜ್ಞರಾದ ಡಾ.ಎಚ್.ಆರ್. ಮಣಿಕರ್ಣಿಕಾ ಅಭಿಪ್ರಾಯಪಟ್ಟರು.
ರೋಟರಿ ಸಂಸ್ಥೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಹಾಗೂ ತಾಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ತಾಲೂಕಿನ ರತ್ನಪುರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಹದಿಹರೆಯದ ವಯಸ್ಸಿನ ಸಮಸ್ಯೆಗಳು ಮತ್ತು ಆರೋಗ್ಯ ಕಾಪಾಡಿಕೊಳ್ಳುವ ಕುರಿತಾದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹದಿಹರೆಯದ ಹಂತದಲ್ಲಿ ಹೆಣ್ಣು ಮತ್ತು ಗಂಡುಮಕ್ಕಳಲ್ಲಿ ಶಾರೀರ ಹಾಗೂ ಮಾನಸಿಕ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳು ಸಹಜವೇ ಆದರೂ ಕೆಲವೊಮ್ಮೆ ಅವು ಗಾಬರಿ ಹುಟ್ಟಿಸುತ್ತವೆ. ಆದರೆ ಆದನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿ ಬೆಳೆಯಬೇಕೆಂದರು.
ದೈಹಿಕ ಬದಲಾವಣೆ ಸಮಸ್ಯೆ: ಹದಿಹರೆಯದ ಹೆಣ್ಣುಮಕ್ಕಳಲ್ಲಿ ಪ್ರಮುಖವಾಗಿ ದೈಹಿಕವಾಗಿ ರಕ್ತಹೀನತೆ, ಋತುಚಕ್ರ ಆರಂಭ ಮುಂತಾದ ಸಮಸ್ಯೆಗಳಿದ್ದರೆ ಗಂಡುಮಕ್ಕಳಲ್ಲಿ ಧ್ವನಿ ಬದಲಾವಣೆ, ದೈಹಿಕವಾಗಿ ರೂಪ ಬದಲಾವಣೆಯಂತಹ ಸಮಸ್ಯೆಗಳು ಎದುರಾಗುತ್ತವೆ. ಇಬ್ಬರಲ್ಲೂ ಲೈಂಗಿಕ ವಿಷಯಗಳಲ್ಲಿ ಕುತೂಹಲ ಹೆಚ್ಚುತ್ತದೆ. ಹದಿಹರೆಯ ಭಾವನಾತ್ಮಕವಾಗಿ ಅತ್ಯಂತ ಸೂಕ್ಷ್ಮ ಹಂತ. ಈ ಹಂತದಲ್ಲಿ ಕೆಟ್ಟ ಚಟಗಳಿಂದ ದೂರವಿರುವುದು ಅಗತ್ಯ ಎಂದು ಹೇಳಿದರು.
ಸಂಚಾರಿ ಗಿರಿಜನ ಆರೋಗ್ಯ ಘಟಕದ ಡಾ.ಸೌಮ್ಯಶ್ರೀ ಮಾತನಾಡಿ, ಪ್ರತಿ ಗುರುವಾರ ಮಧ್ಯಾಹ್ನ 3 ರಿಂದ 5ರವರೆಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಹದಿಹರೆಯದ ಹೆಣ್ಣುಮಕ್ಕಳಿಗೆ ಉಚಿತವಾಗಿ ಕಬ್ಬಿಣದ ಅಂಶಗಳನ್ನು ಹೊಂದಿರುವ ಮಾತ್ರೆಗಳು ಹಾಗೂ ಸಮಸ್ಯೆಗಳ ಪರಿಹಾರದ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದ್ದು, ಹೆಣ್ಣುಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲ ನಾಗರಾಜ್, ಉಪಪ್ರಾಂಶುಪಾಲ ಮೋಹನ್ರಾಜ್ ಹಾಗೂ ರೋಟರಿ ಅಧ್ಯಕ್ಷ ಧರ್ಮಾಪುರ ನಾರಾಯಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಸ್, ಸ್ವಾಮಿ ವಿವೇಕಾನಂದ ಮೂವ್ಮೆಂಟ್ನ ವೀಣಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್, ಡಾ.ಸರೋಜಿನಿ ವಿಕ್ರಂ, ಸುನೀತಾ ಜಯರಾಮೇಗೌಡ, ರಾಮಲಿಂಗಪ್ಪ, ಎಚ್.ಎಸ್. ಸಚ್ಚಿತ್, ಹನಗೋಡು ನಟರಾಜ್, ರೋಟರಿ ಕ್ಲಬ್ ಕಾರ್ಯದರ್ಶಿ ಶಿವಕುಮಾರ್ ಭಾಗವಹಿಸಿದ್ದರು. ನಂತರ ತರಗತಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಆರೋಗ್ಯ ಮತ್ತು ಹದಿಹರೆಯದ ಸಮಸ್ಯೆಗಳ ಕುರಿತು ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಸಿತು.
ಅಲ್ಲಲ್ಲಿ ಏನೇನು?
ಗುರುವಾರ 24.7.14
ನಂಜನಗೂಡು ತಾಲೂಕು: ಜಿಪಂ ನಿರ್ಮಲ ಭಾರತ್ ಅಭಿಯಾನದ ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ, ನೈರ್ಮಲ್ಯ ವಾಹಿನಿಯ ಪ್ರವಾಸ, ಹುಲ್ಲಹಳ್ಳಿ.
ಟಿ. ನರಸೀಪುರ ತಾಲೂಕು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಮಠಾಧಿಪತಿಗಳ ಗೋಷ್ಠಿ, ಧಾರ್ಮಿಕ ಸಭೆ, ಸಾನ್ನಿಧ್ಯ- ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಪಸ್ಥಿತಿ- ಶಿವಲಿಂಗ ಸ್ವಾಮೀಜಿ, ಬೆಳಗ್ಗೆ 9. ಮಠಾಧಿಪತಿಗಳ ಗೋಷ್ಠಿ, ಬೆಳಗ್ಗೆ 11. ಸಾಂಸ್ಕೃತಿಕ ಕಾರ್ಯಕ್ರಮಗಳು, ಮೇದಿನಿ ಮಠ, ಕಾವೇರಿಪುರ, ಸಂಜೆ 4.
ಕೆ.ಆರ್. ನಗರ ತಾಲೂಕು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗ್ರಾಮವಾಹಿನಿ ಮತ್ತು ಗ್ರಾಮಸಂಪರ್ಕ ಕಾರ್ಯಕ್ರಮ, ಬೀದಿನಾಟಕ, ಚಲನಚಿತ್ರ ಹಾಗೂ ವಸ್ತುಪ್ರದರ್ಶನ, ಹಂಪಾಪುರ ಮತ್ತು ಮಂಚನಹಳ್ಳಿ.