ಹವಾಮಾನಕ್ಕೆ ಪೂರಕ ಬೇಸಾಯ ಅಗತ್ಯ
ಬೈಲಕುಪ್ಪೆ: ಮುಸುಕಿನ ಜೋಳದ ಉತ್ಪಾದನೆ ಹೆಚ್ಚಿಸಲು ಹವಾಮಾನಕ್ಕೆ ಅನುಗುಣವಾಗಿ ಬೇಸಾಯ ಮಾಡಬೇಕು ಎಂದು ಬೆಂಗಳೂರಿನ ಕೃಷಿ ವಿವಿ ಪ್ರಾಧ್ಯಾಪಕ ಡಾ.ಟಿ. ಶೇಷಾದ್ರಿ ತಿಳಿಸಿದರು.
ಸಮೀಪದ ಚಿಕ್ಕಹೊನ್ನೂರು ಗ್ರಾಮದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ವಲಯ ಕೃಷಿ ಸಂಶೋಧನಾ ಕೇಂದ್ರ, ಮಂಡ್ಯದ ವಿ.ಸಿ.ಫಾರಂ ನೇತೃತ್ವದಲ್ಲಿ ಆಯೋಜಿಸಿದ್ದ ಮುಸುಕಿನ ಜೋಳದ ಬೆಳೆಯಲ್ಲಿ ನಿಖರ ಕೃಷಿ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರು ಜೋಳದ ತಳಿ, ಮಣ್ಣು ಪರಿಕ್ಷೆ, ರಸಗೊಬ್ಬರ ಬಳಕೆಯ ಜೊತೆಗೆ ಹವಾಮಾನಕ್ಕೆ ಅನುಸಾರವಾಗಿ ಬೇಸಾಯ ಮಾಡಿದರೆ ಒಂದು ಎಕರೆಗೆ, 35 ರಿಂದ 40 ಕ್ವಿಂಟಾಲ್ ಜೋಳ ಬೆಳೆಯಬಹುದು ಎಂದರು. ಕೃಷಿ ತಜ್ಞ ಡಾ.ನಾಗರಾಜ್ ಮಾತನಾಡಿ, ಕೊಪ್ಪ ಹಾಗೂ ನಂದಿನಾಥಪುರ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಈ ಭಾಗದ ಸುತ್ತಮುತ್ತಲ ರೈತರಿಗೆ ಉಚಿತವಾಗಿ ಮುಸುಕಿನ ಜೋಳ ಹಾಗೂ ರಸಗೊಬ್ಬರ ಸೇರಿದಂತೆ ರು. 8 ಲಕ್ಷ ಅನುದಾನ ನೀಡಿದೆ ಎಂದರು.
ತಜ್ಞರಾದ ಡಾ.ಎಸ್.ಪಿ. ಯೋಗಾನಂದ, ಡಾ.ಪುಟ್ಟರಾಮ ನಾಯಕ, ಡಾ.ಆರ್.ಕೃಷ್ಣಮೂರ್ತಿ, ಡಾ.ಎಸ್.ಎಸ್. ಪ್ರಕಾಶ್, ಡಾ.ಡಿ.ಕೆ. ಸಿದ್ದೇಗೌಡ, ಡಾ.ತಿಮ್ಮೇಗೌಡ, ಎಂ.ಕೆ.ಶ್ರುತಿ, ಎಂ.ದಿವ್ಯ, ಸತೀಶ್, ರೈತರಾದ ನರಸಿಂಹ, ದೊಡ್ಡಯ್ಯ, ಮರೀಗೌಡ, ಕಾಳಮ್ಮ, ಹುರಿತಮ್ಮ, ಡೇವಿಡ್, ಮಹಮದ್ ಕುಟ್ಟಿ, ನಾಗಣ್ಣ ಇದ್ದರು.