ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮನಸ್ಸುಗಳ ಬೆಸೆಯುವ ಸಾಹಿತ್ಯ, ಸಂಗೀತ

Mainashree
Updated On : 25 Jul 2014, 10:48 am

ಕ.ಪ್ರ. ವಾರ್ತೆ, ಮೈಸೂರು, ಜು.25
ಮನಸ್ಸುಗಳನ್ನು ಬೆಸೆಯುವಲ್ಲಿ ಸಾಹಿತ್ಯ ಹಾಗೂ ಸಂಗೀತ ಸಹಕಾರಿ ಎಂದು ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಹೇಳಿದರು.
ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಮಂಡ್ಯದ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಹಾಗೂ ಮೈಸೂರಿನ ಮಹಾಜನ ಪದವಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಎನಿತು ಇನಿದು ಈ ಕನ್ನಡ ನುಡಿಯು ಸರಣಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಆನಂದಕಂದ ವಿರಚಿತ ಭಾವಗೀತೆಗಳ ಎರಡು ದಿನಗಳ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಕಳೆದು ಹೋಗುತ್ತಿರುವ ಸಮಾಜದ ಸಂಬಂಧ ಹಾಗೂ ಒಡೆದು ಹೋಗುತ್ತಿರುವ ಮನಸ್ಸುಗಳನ್ನು ಬೆಸೆಯುವಲ್ಲಿ ಸಾಹಿತ್ಯ ಹಾಗೂ ಸಂಗೀತ ಸಹಕಾರಿಯಾದುದು. ಇಂತಹ ಕಲಾಭಿರುಚಿಯನ್ನು ಯುವ ಪೀಳಿಗೆಯು ಬೆಳೆಸಿಕೊಳ್ಳುತ್ತಿರುವುದು ಉತ್ತಮ ಹವ್ಯಾಸ ಎಂದರು.
ಕವಿ ಬೆಟಗೇರಿ ಕೃಷ್ಣಶರ್ಮರ ಹಾಡುಗಳು ಪಂಚಮಿ ಭಾವದ ಗೀತೆಗಳಾಗಿದ್ದು. ದಕ್ಷಿಣ ಕರ್ನಾಟಕದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಅವರು ಅಂತಹ ಶೈಲಿಯ ಗೀತೆಗಳ ರಚನಕಾರರಾಗಿದ್ದರೆ, ಉತ್ತರ ಕರ್ನಾಟಕದಲ್ಲಿ ಬೆಟಗೇರಿ ಹೆಸರುವಾಸಿಯಾಗಿದ್ದರು ಎಂದು ಅವರು ಸ್ಮರಿಸಿದರು.
ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಜೆಎಸ್‌ಎಸ್ ಆಸ್ಪತ್ರೆ ಮಾನಸಿಕ ಹಾಗೂ ಲೈಂಗಿಕ ರೋಗತಜ್ಞ ಡಾ.ಟಿ.ಎಸ್. ಸತ್ಯನಾರಾಯಣ ರಾವ್ ಮುಖ್ಯ ಅತಿಥಿಯಾಗಿದ್ದರು.  ಟ್ರಸ್ಟ್ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ, ಟ್ರಸ್ಟಿ ಸತೀಶ್ ಕುಲಕರ್ಣಿ, ಪ್ರಾಂಶುಪಾಲ ಪ್ರೊ.ಕೆ.ವಿ ಪ್ರಭಾಕರ, ಪ್ರತಿಭಾ ವೇದಿಕೆ ಸಹಸಂಚಾಲಕ ರಾಧೇಶ್, ಪ್ರತಿಭಾಂಜಲಿ ಅಧ್ಯಕ್ಷ ಡೇವಿಡ್, ಗಾಯಕ ಉಪಾಸನಾ ಮೋಹನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement