ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಲಿ: ಡಾ.ವೆಂಕಟೇಶಮೂರ್ತಿ

Mainashree
Updated On : 25 Jul 2014, 10:48 am

ಮೈಸೂರು: ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದು ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.
ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ, ಮಂಡ್ಯದ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಶುಕ್ರವಾರ ನಗರದ ವಿಜಯ ವಿಠಲ ಸಂಯುಕ್ತ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಆನಂದಕಂದರ ಕಾವ್ಯ- ವ್ಯಕ್ತಿತ್ವ ಪರಿಚಯ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಮಾಡುವ ತಪ್ಪುಗಳನ್ನು ಪೋಷಕರೇ ತಿದ್ದಬೇಕು. ಯಾರಾದರೂ ತಮ್ಮ ಸುತ್ತಮುತ್ತ ಹುಡುಗಿಯರನ್ನು ರೇಗಿಸಿದರೆ ವಿರೋಧಿಸಬೇಕು. ಅಂತವರಿಗೆ ಬುದ್ಧಿ ಕಲಿಸಬೇಕು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳತ್ತ ಮುಖ ಗಮನಹರಿಸಬೇಕು. ತಮ್ಮ ಬುದ್ಧಿವಂತಿಕೆಯನ್ನು ಅಂಕಗಳಿಗೆ ಸೀಮಿತಗೊಳಿಸದೆ ಶೈಕ್ಷಣಿಕ ಸಂಸ್ಥೆಯಿಂದ ಹೊರಗೆ ವಿಸ್ತರಿಸಬೇಕು. ಮೈದಾನದಲ್ಲಿ ಹೆಚ್ಚು ಕಲಿತರೆ ಸೋಲು- ಗೆಲವಿನ ಅರಿವಾಗಲಿದೆ ಎಂದರು.
ಸಿನೆಮಾ ನಟರು ನಾಯಕರಲ್ಲ: ರಾಜಕಾರಣಿಗಳು, ಸಿನೆಮಾ ನಟರನ್ನು ನಾಯಕರು ಎಂದು ಒಪ್ಪಿಕೊಳ್ಳಬಾರದು. ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಗಂಗೂಬಾಯಿ ಹಾನಗಲ್, ಆನಂದಕಂದರಂತಹ ಹಿರಿಯ ಸಾಹಿತಿಗಳೇ ನಮ್ಮ ನಾಯಕರಾಗಿದ್ದಾರೆ. ಅಪ್ಪ ಮಾಡಿದ ಆಸ್ತಿ ಮಗನಿಗಾದರೇ, ಸಾಹಿತಿಗಳು ಮಾಡಿದ ಆಸ್ತಿ ಇಡೀ ಕರ್ನಾಟಕಕ್ಕೆ ಸಲ್ಲುವಂತದ್ದು. ವಿದ್ಯಾರ್ಥಿಗಳು ಇಂದು ರಾಜಕಾರಣಿಗಳು, ಸಿನೆಮಾ ನಟರು, ಕ್ರಿಕೆಟಿಗರನ್ನು ಭಾರತದ ನಾಯಕರು ಎಂದು ತಪ್ಪು ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಚಿಂತಕ ಗುಬ್ಬಿಗೂಡು ರಮೇಶ್ ಅವರು ಆನಂದ ಕಂದರ ಸಮಗ್ರ ಸಾಹಿತ್ಯ ಮತ್ತು ವ್ಯಕ್ತಿತ್ವ ಕುರಿತು ಉಪನ್ಯಾಸ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ, ವಿಜಯವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಆ.ವಾಸುದೇವ ಭಟ್, ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯಪ್ರಕಾಶ್, ಪ್ರತಿಭಾಂಜಲಿ ಅಧ್ಯಕ್ಷ ಪ್ರತಿಭಾಂಜಲಿ ಡೇವಿಡ್, ಸತೀಶ್ ಕುಲಕುರ್ಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement