ಮುಖ್ಯಾಧಿಕಾರಿ ವಿರುದ್ಧ ಅಧ್ಯಕ್ಷರ ಗರಂ
ಟಿ. ನರಸೀಪುರ: ಚುನಾಯಿತ ಸದಸ್ಯರ ಆಡಳಿವನ್ನೇ ಹೈಜಾಕ್ ಮಾಡುವ ಮೂಲಕ ಮುಖ್ಯಾಧಿಕಾರಿ ವಿ.ಟಿ. ವಿಲ್ಸನ್ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಾ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲವೆಂದು ಪಪಂ ಅಧ್ಯಕ್ಷೆ ರತ್ನಮ್ಮ ಲಿಂಗಣ್ಣ ಗಂಭೀರ ಆರೋಪ ಮಾಡಿದರು.
ಜನರಿಂದ ಚುನಾಯಿತರಾಗಿ ಒಂದೂವರೆ ವರ್ಷವಾದರೂ ಯಾವೊಂದು ಅಭಿವೃದ್ಧಿ ಕಾರ್ಯ ಮಾಡಲಾಗಿಲ್ಲ. ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಅಸಹಕಾರದಿಂದಾಗಿ ತಾವು ಸೇರಿದಂತೆ ಎಲ್ಲ ಸದಸ್ಯರು ಮತ ನೀಡಿದ ಮತದಾರರ ಏನನ್ನೂ ಮಾಡಲಾಗದ ಅಸಹಾಯಕರಾಗಿದ್ದೇವೆ ಎಂದು ಅಲವತ್ತುಕೊಂಡರು. ಇಲ್ಲಿನ ಅವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಾರ್ಡ್ನ ನಿವಾಸಿಗಳಿಂದ ನೇರವಾಗಿ ದೂರು ಬಂದರೆ ಗಮನಹರಿಸುವುದಾಗಿ ನಿರ್ಲಕ್ಷ್ಯ ಉತ್ತರ ನೀಡುವ ವಿಲ್ಸನ್ ಅವರಿಂದ ಪಪಂ ಸದಸ್ಯರ ಹಕ್ಕುಚ್ಯುತಿಯಾಗುತ್ತಿದೆ. ಜನರು ಅಹವಾಲು ಆಲಿಸಿ, ಪರಿಹರಿಸದಷ್ಟು ದುರ್ಬಲ ಸ್ಥಿತಿಗೆ ನಮ್ಮನ್ನು ತಳ್ಳಲಾಗುತ್ತಿದೆ. ದಿಕ್ಕು ತಪ್ಪಿಸಿ ಕಡತಗಳಿಗೆ ಸಹಿ ಪಡೆಯಲಾಗುತ್ತಿದೆ ಎಂದು ದೂರಿದರು.
ಸದಸ್ಯರಾದ ಟಿ.ಜಿ.ಪುಟ್ಟಸ್ವಾಮಿ, ಎಂ. ರಾಘವೇಂದ್ರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಶ್ರುತಿಮಣಿಕಂಠ, ಸದಸ್ಯರಾದ ಮೀನಾಕ್ಷಿ, ಸುಧಾಗುರುಮಲ್ಲ, ಎಂ. ಮಹದೇವಸ್ವಾಮಿ, ಮುಖಂಡ ಪ್ರಕಾಶ್, ಮಣಿಕಂಠ ಇದ್ದರು.