ಹಿಂದೂ ಮುಸ್ಲಿಂ ಸಹಬಾಳ್ವೆಗೆ ಕರೆ
ನಂಜನಗೂಡು: ರಂಜಾನ್ ಹಬ್ಬದಂದು ಹಿಂದೂ ಮುಸ್ಲಿಂ ಜನಾಂಗದಲ್ಲಿ ಯಾವುದೇ ಒಡಕು ಬಾರದಂತೆ ಸಾಮರಸ್ಯದಿಂದ ಶಾಂತಿಯಿಂದ ಹಬ್ಬ ನಡೆಸಲು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದ ಎಲ್ಲ ವರ್ಗದ ಮುಖಂಡರು ಪರಸ್ಪರ ಸಹಕಾರ ನೀಡಬೇಕೆಂದು ಸಮಾಜ ಸೇವಕ ಯು.ಎನ್. ಪದ್ಮನಾಭರಾವ್ ಹೇಳಿದರು.
ರಂಜಾನ್ ಹಬ್ಬದ ಹಿನ್ನೆಲೆ ಶುಕ್ರವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಹಿಂದೂ, ಮುಸ್ಲಿಂ ಮುಖಂಡರ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಂಜನಗೂಡಿನ ಇತಿಹಾಸದಲ್ಲೇ ಹಿಂದೂ ಮತ್ತು ಮುಸ್ಲಿಮರಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜಾತೀಯತೆ ತೊರೆದು ಪರಸ್ಪರ ಉತ್ತಮ ಬಾಂಧವ್ಯ ಹೊಂದುವ ಮೂಲಕ ಸಾಮರಸ್ಯ ಬಾಳ್ವೆಗೆ ಪಟ್ಟಣ ಸಾಕ್ಷಿಯಾಗಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಮಾಜಿ ಉಪಾಧ್ಯಕ್ಷ ಎನ್.ಇಂದ್ರ, ಪುರಸಭಾ ಸದಸ್ಯರಾದ ಎನ್.ಎಂ.ಮಂಜುನಾಥ್, ಖಾಲಿದ್ ಅಹಮದ್, ಬಾಬು ಅಹಮದ್, ಹಿರಿಯ ಕಾಂಗ್ರೆಸ್ ಮುಖಂಡ ಎ. ಅಬ್ದುಲ್ ಖಾದರ್, ಮುಖಂಡರಾದ ಅಸ್ಗರ್, ಖಲೀಂ, ಎಸ್ಐ ವಿ. ಚೇತನ್ ಇದ್ದರು.