ಎಂಇಎಸ್ ಗೂಂಡಾವರ್ತನೆ ವಿರುದ್ಧ ಧರಣಿ
ಮೈಸೂರು: ಬೆಳಗಾವಿ ಜಿಲ್ಲೆಯ ಯಳ್ಳೂರು ಗ್ರಾಮದಲ್ಲಿ ಎಂಇಎಸ್ ಮತ್ತು ಶಿವಸೇನೆಯವರ ಗೂಂಡಾವರ್ತನೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಹಿತರಕ್ಷಣಾ ವೇದಿಕೆಯವರು ನಗರದಲ್ಲಿ ಶನಿವಾರ ಪ್ರತ್ಯೇಕವಾಗಿ ಪ್ರತಿಭಟಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಕರವೇ ಕಾರ್ಯಕರ್ತರು, ಎಂಇಎಸ್ ಮತ್ತು ಶಿವಸೇನೆಯ ಪ್ರತಿಕೃತಿ ದಹಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹೈಕೋರ್ಟ್ ಆದೇಶದಂತೆ ಮರಾಠಿ ನಾಮಫಲಕವನ್ನು ಸರ್ಕಾರಿ ಅಧಿಕಾರಿಗಳು ತೆರವುಗೊಳಿಸಿದ್ದರು. ಇದನ್ನು ಖಂಡಿಸಿ ಪ್ರತಿಭಟಿಸಿದ ಶಿವಸೇನೆ ಮತ್ತು ಎಂಇಎಸ್ ಗೂಂಡಾಗಳು, ರಾಜ್ಯದ 5 ಬಸ್ಗಳನ್ನು ಧ್ವಂಸಗೊಳಿಸಿ ಪ್ರಯಾಣಿಸುತ್ತಿದ್ದ ಕನ್ನಡಿಗರ ಮೇಲೆ ಹಲ್ಲೆ ನಡೆಸಿರುವುದು ಖಂಡನಿಯ. ಎಂಇಎಸ್, ಶಿವಸೇನೆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಕರವೇ ನಗರಾಧ್ಯಕ್ಷ ಕೆ. ಮಾದೇಶ್, ಮುಖಂಡರಾದ ಚಿಕ್ಕಪುಟ್ಟಿ, ಕೃಷ್ಣಕುಮಾರ್, ಪಾಟೀಲ್, ಮಂಜುನಾಥ್ ಇದ್ದರು.
ಕನ್ನಡ ಹಿತರಕ್ಷಣಾ ವೇದಿಕೆ: ನಗರದ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟಿಸಿದ ಕನ್ನಡ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು, ಎಂಇಎಸ್ ಮತ್ತು ಶಿವಸೇನೆಯವರು ಬೆಳಗಾವಿಯಲ್ಲಿ ಬಸ್ ಧ್ವಂಸಗೊಳಿಸಿ ಕನ್ನಡಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದರು.
ರಾಜ್ಯ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಂಡು, ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರನ್ನು ಗೂಂಡಾ ಕಾಯ್ದೆ ಅನ್ವಯ ಬಂಧಿಸಬೇಕು. ಈ ಎರಡು ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಅಧ್ಯಕ್ಷ ವಿ.ವಿನಯ್ಕುಮಾರ್, ಗೌರವಾಧ್ಯಕ್ಷ ವೀರಣ್ಣಗೌಡ, ಮುಖಂಡರಾದ ದೇವರಾಜ್ ಟಿ. ಕಾಟೂರು, ಚಂದ್ರಕಾಂತ್ಗೌಡ, ಚೇತನ್, ರವಿ, ಶ್ರೀನಿವಾಸ್, ಇಲಿಯಾಸ್, ಮಹೇಶ್, ಲಕ್ಷ್ಮಣ್, ಅನಿಲ್, ಮಂಜು, ನಿಶಾತ್, ದಿಲೀಪ್ ಇದ್ದರು.