ತಂಬಾಕು ಸೇವನೆಯಿಂದ ವರ್ಷಕ್ಕೆ 7 ಲಕ್ಷ ಮಂದಿ ಸಾವು
ಪಿರಿಯಾಪಟ್ಟಣ: ದೇಶದಲ್ಲಿ ವರ್ಷಕ್ಕೆ 7 ಲಕ್ಷ ಮಂದಿ ತಂಬಾಕು ಸೇವನೆಯಿಂದ ಮರಣ ಹೊಂದುತ್ತಿದ್ದಾರೆ ಎಂದು ವೈದ್ಯ ಡಾ.ಬ್ರಿಜ್ಮೋಹನ್ ಹೇಳಿದರು.
ಪಟ್ಟಣದ ರೋಟರಿ ಸಭಾಂಗಣದಲ್ಲಿ ರೋಟರಿ ಕ್ಲಬ್, ಆಟೋ ಮತ್ತು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದಿಂದ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರಿಗಾಗಿ ಶನಿವಾರ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹಿತ ಹಾಗೂ ಮಿತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ದೇಹಕ್ಕೆ, ಮನಸ್ಸಿಗೆ ಹಾಗೂ ಆರೋಗ್ಯಕ್ಕೆ ಸೂಕ್ತ ಆಹಾರ ಸೇವಿಸುವುದು ಒಳಿತು. ಒತ್ತಡದ ಜೀವನದಿಂದಾಗಿ ಅನೇಕ ಬಗೆಯ ಕಾಯಿಲೆಗಳು ಬರುತ್ತಿದ್ದು, ಸಾಧ್ಯವಾದಷ್ಟು ಒತ್ತಡದ ಬದುಕಿನಿಂದ ಪ್ರತಿಯೊಬ್ಬರೂ ಹೊರಬಂದು ಸರಳವಾಗಿ ಜೀನವ ನಡೆಸುವ ಜೀವನ ಶೈಲಿ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಅಪಘಾತಗಳು ಸಂಭವಿಸಿದಾಗ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸೇರಿಸುವ ಮುನ್ನ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚಾಲಕರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಕೃಷ್ಣೇಗೌಡ, ಪದಾಧಿಕಾರಿಗಳಾದ ಕೆ.ಬಿ.ರವಿಶಂಕರ್, ಬಿ.ವಿ. ಜವರೇಗೌಡ, ಡಾ.ಪ್ರಕಾಶ್, ವಿಜಯ್ಕುಮಾರ್, ಕೆ.ಕೆ.ಮಾಧು, ವಿನಯ್ಶೇಖರ್, ಹರೀಶ್, ಬಿಎಸ್ಪಿ ರಾವ್, ನಾಗರಾಜ್, ಕಾರು ಚಾಲಕರ ಸಂಘದ ಅಧ್ಯಕ್ಷ ರವಿ, ಆಟೋ ಚಾಲಕರ ಸಂಘದ ಆನಂದ್, ಡಾ. ಜಾಧವ್ ಇದ್ದರು.