ಎಂಇಎಸ್ ಪುಂಡಾಟಿಕೆಗೆ ಸಮ್ಮೇಳನದಲ್ಲಿ ಖಂಡನೆ
ಬನ್ನೂರು: ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಕನ್ನಡ ಭಾಷೆಗೆ ಕುಂದುಂಟು ಮಾಡುತ್ತಿರುವ ಎಂಇಎಸ್ ಹಾಗೂ ಸಿಎಫ್‌ಟಿಆರ್ ನಡತೆಯನ್ನು ಬನ್ನೂರಿನಲ್ಲಿ ನಡೆದ ಮೈಸೂರು ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖಂಡಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಚಂದ್ರಶೇಖರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಎಂಇಎಸ್‌ನವರು ಬೆಳಗಾವಿ ಜಿಲ್ಲೆಯ ಯಳ್ಳೂರು ಮರಾಠಿ ನಾಮಫಲಕ ಹಾಕುವ ನೆಪದಲ್ಲಿ ಕನ್ನಡಕ್ಕೆ ಕುತ್ತು ತರುತ್ತಿದ್ದಾರೆ. ಅವರ ಕೃತ್ಯವನ್ನು ನಾವೆಲ್ಲ ಖಂಡಿಸಬೇಕು. ನಮ್ಮ ಆಡುನುಡಿ ಕನ್ನಡ ಭಾಷೆಗೆ ತೊಂದರೆ ನೀಡುವವರಿಗೆ ತಕ್ಕ ಉತ್ತರ ನೀಡಬೇಕಿದೆ. ಹಾಗೆ ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ತ್ರಿಭಾಷಾ ಸೂತ್ರ ಅನುಸರಿಸದೆ ಕನ್ನಡಕ್ಕೆ ದ್ರೋಹ ಎಸಗಲಾಗುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು. ರಾಜ್ಯದಲ್ಲಿ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಡಕ್ ಮಾತುಗಳ ಮೂಲಕ ಖಂಡಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ನಮ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ದೇವತಾ ಸ್ಥಾನ ನೀಡಿದ್ದೇವೆ ಎನ್ನಲಾಗುತ್ತಿದೆ. ವಾಸ್ತವವಾಗಿ ಮಹಿಳೆಯರನ್ನು ಮನುಷ್ಯರನ್ನಾಗಿ ನೋಡದಂತ ಸ್ಥಿತಿ ಸ್ಥಾಪಿತವಾಗಿದೆ. ನಮ್ಮನ್ನು ಬದುಕಲು ಬಿಡಿ, ಜೈಲು ಸೇರಿ ಎಂಬ ಮಾತುಗಳನ್ನು ತಮ್ಮದೇ ಧಾಟಿಯಲ್ಲಿ ಸ್ಫುರಿಸಿದರು. ಇನ್ನು ಶಾಸಕ ಕೆ.ಎಸ್.ಪುಟ್ಟಣ್ಣ ಮಾತನಾಡಿ, ಭಾಷೆ ಕನ್ನಂಬಾಡಿ ಕಟ್ಟೆ ಇದ್ದ ಹಾಗೆ. ಸಾಹಿತ್ಯ ಕಾಲುವೆಗಳಿದ್ದ ಹಾಗೆ. ಸಾಹಿತ್ಯವು ಎಲ್ಲರ ಬಾಯಲ್ಲೂ ಹರಿದು ಕನ್ನಡವನ್ನು ಉಳಿಸಿ ಬೆಳೆಸುವಂತಾಗಬೇಕು ಎಂದರು.