ಪ್ರಾಚೀನ ಕಾಲದಹಸ್ತಪ್ರತಿಗಳ ಸಂರಕ್ಷಿಸಿ, ಪ್ರಕಟಿಸಿ
ಅಂಶಿ ಪ್ರಸನ್ನಕುಮಾರ್
ವ್ಯಾಸರಾಜ ವೇದಿಕೆ (ಬನ್ನೂರು): ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆ, ಪ್ರಕಟಣೆಗೆ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಹಿರಿಯ ವಿದ್ವಾಂಸ ಬಿ.ಎಸ್.ಸಣ್ಣಯ್ಯ ಆಗ್ರಹಿಸಿದ್ದಾರೆ. ಟಿ.ನರಸೀಪುರ ತಾಲೂಕು ಬನ್ನೂರು ಫುಟ್ಬಾಲ್ ಮೈದಾನದ ವ್ಯಾಸರಾಜ ವೇದಿಕೆಯಲ್ಲಿ ಭಾನುವಾರ ಆರಂಭವಾದ ಮೈಸೂರು ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಅವರು, ಕೇಂದ್ರ ಹಸ್ತಪ್ರತಿ ಭಂಡಾರ, ಕನ್ನಡ ಕೇಂದ್ರ ಗ್ರಂಥಾಲಯ ಸ್ಥಾಪಿತವಾದಾಗ ಮಾತ್ರ ಕನ್ನಡ ಸಾಹಿತ್ಯ ಅಭಿವೃದ್ಧಿ ಸಾಧ್ಯ. ಕನ್ನಡ ಜನತೆ ಸಾಹಿತ್ಯದ ಉಪಯೋಗ ಪಡೆಯಲು ಸಹಾಯಕ. ಇದಕ್ಕೆಲ್ಲಾ ರಾಜ್ಯ ಸರ್ಕಾರದ ಉದಾರತೆ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ಕನ್ನಡಿಗರೆಲ್ಲರೂ ಮಾತೃಭಾಷೆ ಕನ್ನಡದಲ್ಲಿಯೇ ಅಭ್ಯಾಸ ಮಾಡಬೇಕು. ಕನ್ನಡ ಗ್ರಂಥಗಳು ಎಲ್ಲ ಪಟ್ಟಣ, ಹಳ್ಳಿಗಳಲ್ಲಿ ದೊರೆಯುವಂತಾಗಬೇಕು. ಜನಸಾಮಾನ್ಯರು ಅವುಗಳನ್ನು ಉಪಯೋಗಿಸಿಕೊಳ್ಳಲು ಸಾರ್ವಜನಿಕ ಗ್ರಂಥಾಲಯಗಳು ಸ್ಥಾಪಿತವಾಗಬೇಕು ಎಂದು ಹೇಳಿದರು. ಕನ್ನಡ ಸಾಹಿತ್ಯದಲ್ಲಿ ಅನೇಕ ಅಪ್ರಕಟಿತ ಗ್ರಂಥಗಳು ಇಂದಿಗೂ ಪರಿಷ್ಕರಣಕಾರರ ಕೊರತೆಯಿಂದ ಹಸ್ತಪ್ರತಿಗಳಲ್ಲಿಯೇ ನಶಿಸಿ ಹೋಗುತ್ತಿವೆ. ಹಸ್ತಪ್ರತಿಗಳ ಸಂಗ್ರಹ, ಪ್ರಾಚೀನ ಗ್ರಂಥಗಳ ಪರಿಷ್ಕರಣೆ, ಪ್ರಕಟಣೆ ನಿಂತು ಹೋಗಿದೆ. ಕನ್ನಡವನ್ನು ಉದ್ಧಾರ ಮಾಡುತ್ತೇವೆ ಎಂದು ಬೊಬ್ಬೆ ಹೊಡೆಯುವ ಹಿರಿಯ ಸಾಹಿತಿಗಳ್ಯಾರೂ ಈ ಬಗ್ಗೆ ಚಕಾರ ಎತ್ತುವುದಿಲ್ಲ. ಅವರೆಲ್ಲರೂ ತಮ್ಮ ಸ್ವಾರ್ಥಗಳಲ್ಲಿ ನಿರತರಾಗಿದ್ದು, ಪ್ರಶಸ್ತಿಗಳ ಅನ್ವೇಷಣೆ, ಸ್ವಾಧೀನತೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಸಂಸ್ಥೆಗಳಲ್ಲಿ, ಬಸದಿಗಳಲ್ಲಿ, ವಿದ್ವಾಂಸರ ಮನೆಗಳಲ್ಲಿ ಸಂಗ್ರಹವಾಗಿರುವ ಸಾವಿರಾರು ಹಸ್ತಪ್ರತಿಗಳನ್ನು ಯಾವುದೇ ಆಧುನಿಕ ಸಲಕರಣೆಗಳ ಮೂಲಕ ಸಂಗ್ರಹಿಸಿ, ಸಂರಕ್ಷಿಸುವುದು ಇಂದಿನ ತುರ್ತು ಕರ್ತವ್ಯವಾಗಿದೆ ಎಂದರು.
ರಾಜಕಾರಣಿಗಳ ಬಗ್ಗೆ ಬೇಸರ: ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆಯುವ ಬಗ್ಗೆಯೂ ನಮ್ಮ ಸಂಸದರು ಮತ್ತು ರಾಜಕೀಯ ಧುರೀಣರ ನಿರಾಸಕ್ತಿ, ಆಲಸ್ಯ ಧೋರಣೆ ಬೇಸರ ಹುಟ್ಟಿಸುತ್ತದೆ. ನೆರೆರಾಜ್ಯ ನಿಗದಿಯಾದ ಅನುದಾನಕ್ಕಿಂತ ಹಲವು ಪಟ್ಟು ಹೆಚ್ಚಿನದನ್ನು ಸದ್ದಿಲ್ಲದೆ ಲಪಟಾಯಿಸುತ್ತಿರುವಾಗ ನಮ್ಮವರು ಅಗತ್ಯಕ್ಕಿಂತ ಕಡಿಮೆಯಷ್ಟನ್ನಾದರೂ ಮಂಜೂರು ಮಾಡಿಸಿ, ತರುವಲ್ಲಿ ವಿಫಲವಾಗುತ್ತಿದ್ದಾರೆ ಎಂದು ವಿಷಾದಿಸಿದರು.
ರಾಜ್ಯ, ಭಾಷೆ, ಸಂಸ್ಕೃತಿ ಹಿತ ಕಾಪಾಡುವಲ್ಲಿ ನಮ್ಮ ಸಂಸದರಲ್ಲಿ ಒಗ್ಗಟ್ಟಿಲ್ಲದಿರುವುದು, ಪಕ್ಷ ನಿಷ್ಠೆಯೇ ಎಲ್ಲಕ್ಕಿಂತ ಪರಮವೆಂದರು ತಿಳಿದಿರುವುದು, ರಾಷ್ಟ್ರೀಯ ನಾಯಕರೆದುರು ಗುಲಾಮಗಿರಿಯಿಂದ ವರ್ತಿಸುವುದು ನಾಡಿಗೆ ಮಾಡಿದ ವಂಚನೆ ಎಂದು ಜರಿದರು.
ಪ್ರಕಾಶಕರ ಪಾಲಿಕೆ ಸರ್ಕಾರವೇ ಕಂಟಕ: ರಾಜ್ಯ ಸರ್ಕಾರ ಈಗ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಕನ್ನಡ ಗ್ರಂಥಗಳು ಪ್ರಕಟವಾಗುವುದೇ ಸಾಧ್ಯವಿಲ್ಲದಂತಾಗಿದೆ. ಸಾರ್ವಜನಿಕ ಗ್ರಂಥಭಂಡಾರಗಳಿಗಾಗಿ ಪುಸ್ತಕಗಳನ್ನು ಖರೀದಿಸಲು ಸಾರ್ವಜನಿಕರಿಂದ ಸಂಗ್ರಹವಾಗಿರುವ ಕೋಟಿಗಟ್ಟಲೆ ಹಣವನ್ನು ಬೇರಾವುದೋ ರೀತಿಯಲ್ಲಿ ಉಪಯೋಗಿಸಿಕೊಂಡ ಸರ್ಕಾರವು ಪ್ರಕಾಶಕರ ಪಾಲಿಕೆ ಕಂಟಕವಾಗಿದೆ. ಕನ್ನಡ ಜನತೆ, ಕನ್ನಡ ಸಾಹಿತ್ಯವನ್ನು ಉದ್ಧಾರ ಮಾಡುತ್ತೇವೆ ಎಂದು ಬೊಬ್ಬೆ ಹೊಡೆಯುವವರು ಕೇವಲ ಮಾತುಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದರು. ಯಾವುದೇ ವ್ಯಕ್ತಿ ಸಾಹಿತ್ಯಾಭ್ಯಾಸ ಮಾಡಿದಾಗ ಮಾತ್ರ ಪರಿಪೂರ್ಣನಾಗಲು ಸಾಧ್ಯ. ಸಾಹಿತ್ಯಾಭ್ಯಾಸದಿಂದ ಮನಸ್ಸು ಮೃದುವಾಗುತ್ತದೆ. ಸಹನೆ, ಸೌಹಾರ್ದತೆಯು ಅಧಿಕೃತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.