ಮೀಸಲಿಗೆ ಮುನ್ನ ಅರ್ಹತೆ ಬೆಳೆಸಿಕೊಳ್ಳಿ
ಮೈಸೂರು: ಮಹಿಳಾ ಮೀಸಲಾತಿ ಕೇಳುವ ಮುನ್ನ ನಾವು ಅದಕ್ಕೆ ತಕ್ಕ ಅರ್ಹತೆ ಮತ್ತು ಯೋಗ್ಯತೆ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ನಾಯಕಿ ಮಾಳವಿಕ ಅವಿವಾಶ್ ಹೇಳಿದರು.
ನಗರದ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಭಾನುವಾರ ಕೆ.ಆರ್.ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ಮಹಿಳಾ ಮೀಸಲಾತಿ ಕೇಳುವ ಮುನ್ನ ಅರ್ಹತೆ ಮತ್ತು ಯೋಗ್ಯತೆ ಬೆಳೆಸಿಕೊಳ್ಳಬೇಕು. ನಮ್ಮ ಜ್ಞಾನದ ಮಟ್ಟ ವಿಸ್ತರಿಸಿಕೊಳ್ಳಬೇಕು. ದಿನ ಪತ್ರಿಕೆಗಳಲ್ಲಿ ಬರುವ ಸಂಪಾದಕೀಯವನ್ನು ತಪ್ಪದೆ ಓದಬೇಕು. ಎಲ್ಲರೂ ನಾಯಕರಾಗಲು ಸಾಧ್ಯವಿಲ್ಲ. ಅದಕ್ಕೆ ಪರಿಶ್ರಮ ಬೇಕು. ಮಹಿಳಾ ಸಮಾಜದಂತೆ ನಾವು ಮಾತನಾಡುತ್ತ ಕೂತು ಹೋಗುವುದರಿಂದ ಯಾವುದೇ ಪ್ರಯೋಜನ ಆಗದು. ಪಕ್ಷದ ಸಂಘಟನೆಯತ್ತ ಗಮನ ನೀಡಬೇಕು ಎಂದರು. ಮಾಜಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿದರು. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತ ಸಿದ್ದರಾಜು, ಕಾರ್ಯದರ್ಶಿ ವಿದ್ಯಾ ಅರಸ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂತ, ಕೆ.ಆರ್. ಕ್ಷೇತ್ರದ ಅಧ್ಯಕ್ಷೆ ಡಿ.ಸಿ.ಮಂಜುಳಾ ಇದ್ದರು.