ಮೈಸೂರಿಗೆ ವಿದೇಶಿ ಯುವ ಪ್ರತಿನಿಧಿಗಳ ಭೇಟಿ
ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ, ಇಲ್ಲಿನ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದಿಂದ ಹಲವು ರಾಷ್ಟ್ರಗಳ ಯುವ ಪ್ರತಿನಿಧಿಗಳ ತಂಡ ಬುಧವಾರ ನಗರಕ್ಕೆ ಭೇಟಿ ನೀಡಿತ್ತು. ಲಯನ್ಸ್ ಕ್ಲಬ್ ಆಫ್ ಇಂಟರ್ನ್ಯಾಷನಲ್ ಘಟಕ ಹಾಗೂ ಮುಂಬೈನ ಜ್ಯೋತಿಮೆಹ್ತಾ ನೆರವಿನೊಂದಿಗೆ ಆಗಮಿಸಿದ್ದ ಈ ನಿಯೋಗದಲ್ಲಿ ಸ್ವಿಡ್ಜರ್ಲೆಂಡ್, ಜರ್ಮನಿ, ಇಂಗ್ಲೆಂಡ್, ರೋಮಾನಿಯಾ, ಬೆಲ್ಜಿಯಂ, ಮೆಕ್ಸಿಕೋ, ನೆದರ್ಲ್ಯಾಂಡ್, ಪೊಲ್ಯಾಂಡ್, ಫಿನ್ಲ್ಯಾಂಡ್, ಇಟಲಿ ಮತ್ತು ಟರ್ಕಿಯ ಸುಮಾರು 18 ಮಂದಿ ಪ್ರತಿನಿಧಿಗಳು ನಗರಕ್ಕೆ ಆಗಮಿಸಿ, ಅರಮನೆ, ನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿದ್ದರು. ನಗರ ಪಾಲಿಕೆ ಆಡಳಿತ ವ್ಯವಸ್ಥೆ ಕುರಿತು ಅಧ್ಯಯನ ನಡೆಸುವ ಉದ್ದೇಶದಿಂದ ತಂಡದ ಸದಸ್ಯರು ನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿದ್ದರು. ಪ್ರತಿನಿಧಿಗಳನ್ನು ಮೇಯರ್ ಎನ್.ಎಂ.ರಾಜೇಶ್ವರಿ ಸೇರಿದಂತೆ, ಪಾಲಿಕೆ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಮೈಸೂರಿನ ಕುರಿತು ಮಾಹಿತಿ ನೀಡಲಾಯಿತು. ಸಭೆಯಲ್ಲಿ ಮಾತನಾಡಿದ ಪಾಲಿಕೆ ಅಧಿಕಾರಿಗಳು, ಮೈಸೂರು ನಗರದ ವಿಸ್ತೀರ್ಣ, ಜನಸಂಖ್ಯೆ, ಶೈಕ್ಷಣಿಕ ವಿವರಗಳ ಜತೆಗೆ ನಗರ ಪಾಲಿಕೆಯ ಆಡಳಿತ ವ್ಯವಸ್ಥೆ, ಕಾರ್ಯವೈಖರಿ, ಅಧಿಕಾರಿಗಳ ವಿವರಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಬಳಿಕ ತಂಡದ ಪ್ರತಿನಿಧಿಗಳು ಅರಮನೆಗೆ ತೆರಳಿದರು. ಸಾಂಸ್ಕೃತಿಕ ವಿನಿಮಯದ ಅಂಗವಾಗಿ ಭಾರತ ಪ್ರವಾಸ ಕೈಗೊಂಡಿರುವ ಯುವ ಪ್ರತಿನಿಧಿಗಳು ಒಂದು ತಿಂಗಳ ಕಾಲ ಭಾರತದಲ್ಲಿ ವಾಸ್ತವ್ಯ ಹೂಡುವರು. ಈ ಪೈಕಿ ಹದಿನೈದು ದಿನ ಮುಂಬೈನಲ್ಲೆ ವಾಸ್ತವ್ಯ ಹೂಡಿತ್ತು. ಈಗ ಉಳಿದ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳ ಪ್ರಮುಖ ನಗರ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ಮಾಡುವ ಉದ್ದೇಶದಿಂದ ಮೈಸೂರಿಗೆ ಆಗಮಿಸಿದ್ದಾರೆ. ಬುಧವಾರ ಅರಮನೆಗೆ ಭೇಟಿ ನೀಡಿ ವೀಕ್ಷಿಸಿದ ಬಳಿಕ ಚಾಮುಂಡಿಬೆಟ್ಟ, ಶ್ರೀರಂಗಪಟ್ಟಣಕ್ಕೆ ತೆರಳಿದರು. ಆ. 31ಕ್ಕೆ ತಂಡವು ಊಟಿ, ತಮಿಳುನಾಡು, ಹೈದ್ರಾಬಾದ್ಗೆ ತೆರಳಿ ಅಂತಿಮವಾಗಿ ಮುಂಬೈಗೆ ಪ್ರಯಾಣ ಬೆಳಸಲಿದೆ ಎಂದು ಜ್ಯೋತಿ ಮೆಹ್ತಾ ತಿಳಿಸಿದರು.