ಗ್ರಂಥಾಲಯ ಕರ ನೀಡದ ಸ್ಥಳೀಯ ಸಂಸ್ಥೆಗಳು: ಆರೋಪ
ಮೈಸೂರು: ಸ್ಥಳೀಯ ಸಂಸ್ಥೆಗಳು ಜನರಿಂದ ಸಂಗ್ರಹಿಸುವ ತೆರಿಗೆಯಲ್ಲಿ ಶೇ.6 ರಷ್ಟು ಉಪಕರವನ್ನು ಗ್ರಂಥಾಲಯದ ಅಭಿವೃದ್ಧಿಗೆ ನೀಡಬೇಕೆಂಬ ಕಾನೂನಿದ್ದರೂ, ಯಾವ ಸಂಸ್ಥೆಗಳು ಹಣವನ್ನು ಗ್ರಂಥಾಲಯ ಪ್ರಾಧಿಕಾರಿಗಳಿಗೆ ವರ್ಗಾಯಿಸುತ್ತಿಲ್ಲ ಎಂದು ಅಖಿಲ ಕರ್ನಾಟಕ ಪ್ರಕಾಶಕರ ಸಂಘ ಆರೋಪಿಸಿದೆ. ಬಿಬಿಎಂಪಿಯಲ್ಲಿ ಒಟ್ಟು ರು. 200 ಕೋಟಿ ಗೂ ಹೆಚ್ಚು ಬಾಕಿ ಇದೆ. ಮೈಸೂರು ನಗರಪಾಲಿಕೆಯಲ್ಲಿ ರು. 8 ಕೋಟಿ ಬಾಕಿ ಇದೆ. ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಇದೇ ಸಮಸ್ಯೆ ಉದ್ಭವಿಸಿದೆ. ಕಳೆದ ಮೂರು ವರ್ಷಗಳಿಂದಲೂ ಗ್ರಂಥಾಲಯದ ಪುಸ್ತಕಗಳನ್ನು ಖರೀದಿ ಮಾಡಿಲ್ಲ. ಮಾಡಿದ್ದರು ಹಣ ಪಾವತಿಸಿಲ್ಲ. ಎಷ್ಟೋ ಗ್ರಂಥಾಲಯಗಳಿಗೆ ಸುದ್ದಿ ಪತ್ರಿಕೆಗಳನ್ನು ಕೊಳ್ಳಲೂ ಹಣವಿಲ್ಲ. ರಾಜ್ಯದ ಎಲ್ಲ ಪ್ರಕಾಶಕರೂ ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರ ಯಾವ ಉದ್ದೇಶದಿಂದ ಗ್ರಂಥಾಲಯಗಳನ್ನು ಸ್ಥಾಪಿಸಿತೋ ಅದು ಈಡೇರಿಲ್ಲ ಎಂದು ಸಂಘದ ಅಧ್ಯಕ್ಷ ಡಿ.ಎನ್. ಲೋಕಪ್ಪ ವಿಷಾದಿಸಿದ್ದಾರೆ. ಮುಖ್ಯಮಂತ್ರಿಗಳು ಗ್ರಂಥಾಲಯಕ್ಕಾಗಿ ಬಜೆಟ್ನಲ್ಲಿ 50 ಕೋಟಿ ಮೀಸಲಿಟ್ಟರೆ ಸಾಕು. ಪುಸ್ತಕ ಸಂಸ್ಕೃತಿ ಬೆಳೆಯುತ್ತದೆ ಎಂದು ಅವರು ಹೇಳಿದ್ದಾರೆ.