ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಾಗೃತಿಯಿಂದ ಮಾತ್ರ ಮಹಿಳೆಯರ ರಕ್ಷಣೆ ಸಾಧ್ಯ

Rashmi Kasaragodu
Updated On : 1 Aug 2014, 1:23 am

ಮೈಸೂರು: ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯಗಳನ್ನು ಸರ್ಕಾರವಾಗಲೀ, ಪೋಲೀಸರಾಗಲೀ ನಿಯಂತ್ರಿಸಲು ಸಾಧ್ಯವಿಲ್ಲ. ಮಹಿಳೆಯರು ಜಾಗೃತರಾಗಿ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕೆಂದು ಜಿಪಂ ಸದಸ್ಯೆ ಭಾಗ್ಯ ಶಿವಮೂರ್ತಿ ಹೇಳಿದರು. ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ಸಾಗಣೆ ನಿರ್ಮೂಲನೆ ಮತ್ತು ದೌರ್ಜನ್ಯ ವಿರುದ್ಧದ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ನಾನಾ ಆಮಿಷಗಳಿಗೆ ಒಳಗಾಗಿ ಮೋಸದ ಬಲೆಗೆ ಬೀಳುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಜಾಗೃತರಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಬೇಕು. ಶಾಲೆಗಳಲ್ಲಿ ಮಹಿಳಾ ಶಿಕ್ಷಕರು ಹೆಣ್ಣು ಮಕ್ಕಳ ಮೇಲೆ ಹೆಚ್ಚು ನಿಗಾ ವಹಿಸಬೇಕು. ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಗ್ರಾಪಂ ಅಧ್ಯಕ್ಷೆ ಶ್ರೀಮತಿ, ಉಪಾಧ್ಯಕ್ಷೆ ಭಾಗ್ಯ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಬೆಳವಾಡಿ ಶಿವಮೂರ್ತಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕರು ಇದ್ದರು.
ಮಹಿಳೆ ದೌರ್ಜನ್ಯ ಮೆಟ್ಟಿ ನಿಲ್ಲಬೇಕು
ಟಿ. ನರಸೀಪುರ:  ಮಹಿಳೆ ಸಶಕ್ತಳಾಗುವ ಮೂಲಕ ದೌರ್ಜನ್ಯವನ್ನು ಮೆಟ್ಟಿನಿಲ್ಲಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಎಂ. ಮಹದೇವಸ್ವಾಮಿ ಹೇಳಿದರು.  ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ವಿಶೇಷ ಮಹಿಳಾ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಅಬಲೆ ಎಂಬ ಕಾರಣಕ್ಕೆ ಅತ್ಯಾಚಾರದಂತಹ ಕೃತ್ಯಕ್ಕೆ ನಿರಂತರವಾಗಿ ಬಲಿಯಾಗುತ್ತಿದ್ದಾಳೆ. ಕಾನೂನು ಕೂಡ ದುರ್ಬಲವಾಗಿರುವುದರಿಂದ ದುಷ್ಕೃತ್ಯಗಳಿಗೆ ಕಡಿವಾಣ ಬೀಳುತ್ತಿಲ್ಲ. ದೌರ್ಜನ್ಯ ತಡೆಗಟ್ಟಲು ಮಹಿಳೆಯರು ದೈಹಿಕವಾಗಿ ಬಲಶಾಲಿಗಳಾಗಬೇಕೆಂದು ತಿಳಿಸಿದರು. ವಿಶೇಷ ಗ್ರಾಮ ಸಭೆಗೂ ಮೊದಲು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ತಡೆಗಟ್ಟುವ ಘೋಷಣೆಗಳೊಂದಿಗೆ ಜಾಥಾ ನಡೆಯಿತು. ಅಧ್ಯಕ್ಷೆ ಆರ್. ಮೀನಾಕ್ಷಿ, ಉಪಾಧ್ಯಕ್ಷ ಬಿ.ಎಂ. ಗುರುಮೂರ್ತಿ, ಮಾಜಿ ಅಧ್ಯಕ್ಷ ಬಿ.ಎಂ. ಪರಶಿವಮೂರ್ತಿ, ಸದಸ್ಯರಾದ ಭಾಗ್ಯಮ್ಮ, ಜಯಶೀಲ, ದೊಡ್ಡಮ್ಮ, ನೌಕರರಾದ ಎಸ್. ಮನೋಜ್ಕುಮಾರ್, ಜಯಶೇಖರ್, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement