ಮೈಸೂರು: ಇತ್ತೀಚೆಗೆ ಬಿಡುಗಡೆ ಆಗುತ್ತಿರುವ ಚಲನಚಿತ್ರಗಳಲ್ಲಿ ಶೇ.90 ರಷ್ಟು ಜನವಿರೋಧಿ ಆಗಿವೆ ಎಂದು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಕಳವಳ ವ್ಯಕ್ತಪಡಿಸಿದರು.
ರಂಗಾಯಣದ ಶ್ರೀರಂಗದಲ್ಲಿ ಸೋಮವಾರ ಆಯೋಜಿಸಿದ್ದ ರಂಗ ಗೆಳೆಯರ ಸಿನೆಮಾ ಪಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಲನಚಿತ್ರಕ್ಕೆ ತನ್ನದೆ ಆದ ಬಹುದೊಡ್ಡ ವಿನ್ಯಾಸ ಇದೆ. ಅದೊಂದು ಪರಿಣಾಮಕಾರಿ ಮಾಧ್ಯಮವಾಗಿ ಹೊರಹೊಮ್ಮಿದೆ. ಆದರೆ ದುರಾದೃಷ್ಟವಶಾತ್ ಇತ್ತೀಚೆಗೆ ಬಿಡುಗಡೆ ಆಗುವ ಚಲನಚಿತ್ರಗಳ ಪೈಕಿ ಶೇ.90 ರಷ್ಟು ಜನವಿರೋಧಿ ಆಗಿವೆ. ಎಲ್ಲವೂ ದುಡ್ಡಿನ ಮೇಲೆ ನಿಂತಿವೆ. ಆ ಚಲನಚಿತ್ರಗಳಿಗೆ ಯಾವುದೆ ಸಮಾಜದ ತಾಕಲಾಟದ ಅಗತ್ಯ ಇಲ್ಲ. ಯಾವುದೆ ಮಾಧ್ಯಮವಾದರೂ ಅದಕ್ಕೆ ಸಾಮಾಜಿಕ ಜವಾಬ್ದಾರಿ ಇರಬೇಕು. ಇಲ್ಲದಿದ್ದರೆ ಅದೊಂದು ದಂಧೆ ಆಗುತ್ತದೆ ಎಂದರು. ಚಲನಚಿತ್ರಗಳು ಜನರ ನಡುವೆ ಸ್ಥಿರ ಆಗಬೇಕು. ಆದರೆ ಚಲನಚಿತ್ರಗಳ ಭಾಷೆ ಮತ್ತು ಭಾವ ಅಧಃಪತನಕ್ಕೆ ಇಳಿಯುತ್ತದೆ. ವೀಕ್ಷಕರನ್ನು ಭ್ರಮೆಯಲ್ಲಿ ತೊಡಗಿಸುವ ಹುನ್ನಾರ ನಡೆಯುತ್ತಿದೆ. ರಂಗಭೂಮಿ ಗೆಳೆಯರು ಉತ್ತಮ ಸಂದೇಶ ಇರುವ ಸಿನೆಮಾ ಮಾಡುತ್ತಿರುವುದು ಕ್ರಾಂತಿಕಾರಕ ಹೆಜ್ಜೆ. ಇದು ಚಳವಳಿ ಆಗಿ ರೂಪುಗೊಳ್ಳಬೇಕು ಎಂದು ಕರೆ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಚಲನಚಿತ್ರ ನಟ ಮಂಡ್ಯ ರಮೇಶ್ ಮಾತನಾಡಿ, ಸೃಜನಶೀಲ ಚಡಪಡಿಕೆ ಉಳ್ಳವರು ಮಾತ್ರ ಇಂತಹ ಉತ್ತಮ ಚಲನಚಿತ್ರ ನಿರ್ಮಿಸಲು ಸಾಧ್ಯ. ಗಾಂಧಿನಗರದಲ್ಲಿ ಸೂಕ್ಷ್ಮವಂತರಿಗೆ ತಡವಾದ ಗೆಲವು ಲಭಿಸುತ್ತದೆ ಎಂದರು.
ಕಾರ್ಯಕ್ರಮದ ಬಳಿಕ ವಿ.ನಾಗೇಂದ್ರ ಶಾ ಅವರ ಹಾಡು ಹಕ್ಕಿ ಹಾಡು ಚಲನಚಿತ್ರ ಪ್ರದರ್ಶನವಾಯಿತು. ವೇದಿಕೆಯಲ್ಲಿ ನಿರ್ದೇಶಕರಾದ ವಿ.ನಾಗೇಂದ್ರ ಶಾ, ವಿ.ಚಲ, ರವೀಂದ್ರನಾಥ್ ಸಿರಿವರ, ಎಂ.ರವಿ, ಶ್ರೀನಾಥ್ ವಸಿಷ್ಠ, ನೆಲೆ ಹಿನ್ನೆಲೆಯ ಗೋಪಾಲ್ ಇದ್ದರು.