ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶೃಂಗಾರಗೊಳ್ಳಲಿ ಅರಮನೆ; ಬಣ್ಣ ಬೇಡ ಸುಮ್ಮನೆ

Rashmi Kasaragodu
Updated On : 4 Jun 2014, 1:14 am

  ಡಿ.ಎನ್. ಮಹೇಂದ್ರ
ಮೈಸೂರು: ಪ್ರವಾಸೋದ್ಯಮ ತಾಣವಾಗಿ ಮೈಸೂರನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾವೇರಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಮುಂದಾಗಿದೆ. ಆದರೆ ಪ್ರವಾಸಿಗರನ್ನು ಆಕರ್ಷಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸರ್ಕಾರವಾಗಲಿ ಅಥವಾ ಜಿಲ್ಲಾಡಳಿತವಾಗಲಿ ಹೆಚ್ಚು ಗಮನ ನೀಡಿಲ್ಲ.
ಮೈಸೂರಿಗೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರು ಬೆಳಗ್ಗೆ ಚಾಮುಂಡಿಬೆಟ್ಟ, ಮೃಗಾಲಯ, ಮಧ್ಯಾಹ್ನ ಅರಮನೆ, ಸಂಜೆ ಕೆಆರ್‌ಎಸ್‌ಗೆ ಭೇಟಿ ನೀಡಿ ತಮ್ಮ ಊರಿಗೆ ಹಿಂದಿರುಗುತ್ತಾರೆ. ಆದರೆ ಮೈಸೂರಿಗೆ ಬರುವ ಪ್ರವಾಸಿಗರು ಒಂದೆರಡು ದಿನಗಳ ಕಾಲ ಮೈಸೂರಿನಲ್ಲಿಯೇ ಉಳಿಯುವಂತೆ ಮಾಡುವ ಅಗತ್ಯ ಇದೆ. ಆಗ ಮಾತ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ನಿಜವಾದ ಅರ್ಥ ಬರುತ್ತದೆ.
ಈಗ ಕೇಂದ್ರ ಸರ್ಕಾರ ಮೈಸೂರಿನ ಅರಮನೆ ಅಭಿವೃದ್ಧಿಗೆ 4.98 ಕೋಟಿ ಅನುದಾನ ನೀಡಿದೆ. ಆದರೆ ಕೇವಲ ಉದ್ಯಾನ ಅಭಿವೃದ್ಧಿ, ವಿದ್ಯುತ್ ದೀಪಾಲಂಕಾರಕ್ಕೆ ಮಾತ್ರ ಹೆಚ್ಚು ಆದ್ಯತೆ ನೀಡಿದರೆ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಿಲ್ಲ. ಬದಲಿಗೆ ಪ್ರವಾಸಿಗರು ಹೆಚ್ಚು ಆಸಕ್ತಿಯಿಂದ ನೋಡುವಂತೆ ಮಾಡಲು ಇತರೆ ಮಾರ್ಗೋಪಾಯ ಅನುಸರಿಸಬೇಕಿದೆ. ಪ್ರಮುಖವಾಗಿ ಅರಮನೆಗೆ ಭೇಟಿ ನೀಡುವ ಪ್ರವಾಸಿಗರು ಅರಮನೆಯ ಅಂಬಾವಿಲಾಸ, ಕಲ್ಯಾಣ ಮಂಟಪ, ದರ್ಬಾರ್ ಸಭಾಂಗಣ ನೋಡಿ ಹಿಂದಿರುಗುತ್ತಿದ್ದಾರೆ.
ಆದರೆ ಅರಮನೆಯ ಮೂರು, ನಾಲ್ಕು ಮತ್ತು ಐದನೇ ಮಹಡಿಯಲ್ಲಿ ಏನಿದೆ. ಉಳಿದ ಸ್ಥಳದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಯಾವ ಯಾವ ಯೋಜನೆ ಕೈಗೊಳ್ಳಬಹುದು ಎಂಬ ಬಗ್ಗೆ ಚಿಂತಿಸಬೇಕಿದೆ. ಮಹಾರಾಜರು ಬಳಸುತ್ತಿದ್ದ ಕತ್ತಿ, ಗುರಾಣಿ, ಖಡ್ಗ ಮತ್ತಿತರ ಯುದ್ಧ ಸಾಮಗ್ರಿಗಳು, ಗ್ರಾಮಾಫೋನ್ ಮುಂತಾದ ಅನೇಕ ಉಪಕರಣಗಳನ್ನು ಇಲ್ಲಿ ಪ್ರದರ್ಶಿಸಬಹುದು. ಸರ್ಕಾರ ಮತ್ತು ಒಡೆಯರ್ ಕುಟುಂಬದ ಒಡಂಬಡಿಕೆಯೊಂದಿಗೆ ಈ ಯೋಜನೆ ಕೈಗೆತ್ತಿಕೊಳ್ಳಲು ಅವಕಾಶ ಇದೆ. ಆದರೆ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ದೇವಾಲಯಗಳೂ ಆಕರ್ಷಿಸುತ್ತಿಲ್ಲ: ಅರಮನೆಯ ಸುತ್ತಮುತ್ತ ದೇವಾಲಯಗಳೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ. ಕಾರಣ ಇಷ್ಟೆ. ಬಹಳ ಪುರಾತನ ದೇವಾಲಯಗಳು ತನ್ನ ಶಿಲ್ಪಕಲಾಕೃತಿಯನ್ನು ಕಳೆದುಕೊಂಡಿವೆ. ದೇವಸ್ಥಾನದ ಸುತ್ತಲಿನ ವಿಭಿನ್ನ ಕೆತ್ತನೆಗೆ ಒಂದೆ ನಮೂನೆಯ ಬಣ್ಣ ಬಳಿದು ಮೂಲರೂಪಕ್ಕೆ ಧಕ್ಕೆ ಉಂಟಾಗಿದೆ. ಉದಾಹರಣೆಗೆ ಗಾಯತ್ರಿ ದೇವಿ ದೇವಸ್ಥಾನದ ಸುತ್ತ ಸುಮಾರು 67 ಮಾದರಿಯ ಗಾಯತ್ರಿ ವಿಗ್ರಹಗಳಿವೆ. ಆದರೆ ಇದಕ್ಕೆ ಒಂದೆ ರೀತಿಯ ಬಣ್ಣ ಬಳಿದ ಪರಿಣಾಮ ಇವು ತನ್ನ ಮೂಲ ರೂಪ ಕಳೆದುಕೊಂಡಿವೆ. ಅಲ್ಲದೆ ಪ್ರತಿದಿನ ಬೆಳಗ್ಗೆ ನಿಗದಿತ ವೇಳೆಯಲ್ಲಿ ಮಾತ್ರ ದೇವಸ್ಥಾನ ತೆರೆದಿರುತ್ತದೆ. ಉಳಿದಂತೆ ಬಾಗಿಲು ಹಾಕುವುದರಿಂದ ಪ್ರವಾಸಿಗರು ದೇವಸ್ಥಾನಕ್ಕೆ ಭೇಟಿ ನೀಡುತ್ತಿಲ್ಲ. ಅಲ್ಲದೆ ಪ್ರವಾಸಿಗರನ್ನು ಆಕರ್ಷಿಸುವ ಮಾದರಿಯಲ್ಲಿ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಜರಾಯಿ ಇಲಾಖೆ ಸೋತಿದೆ.
ದೇವಸ್ಥಾನಕ್ಕೆ ಮಹಾರಾಜರು ನೀಡಿದ ಅನೇಕ ವಜ್ರಾಭರಣಗಳು ಜಿಲ್ಲಾ ಖಜಾನೆಯಲ್ಲಿವೆ. ಆದರೆ ಒಮ್ಮೆಯೂ ಆ ವಜ್ರಾಭರಣ ತಂದು ದೇವರಿಗೆ ತೊಡಿಸಿ ಮೆರವಣಿಗೆ ನಡೆಸಿಲ್ಲ. ಆಗಾಗ್ಗೆ ವಿಶೇಷ ಪೂಜೆಯನ್ನೂ ಮಾಡಿಲ್ಲ. ಸಂಕ್ರಾಂತಿ, ಶಿವರಾತ್ರಿಯಂದು ಮಾತ್ರ ಕೆಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುವುದು ಬಿಟ್ಟರೆ ಇತರೆ ದಿನಗಳಲ್ಲಿ ಮೆರವಣಿಗೆ ನಡೆಯದು. ಇನ್ನು ಕರ್ನಾಟಕದಲ್ಲಿ ಭುವನೇಶ್ವರಿ ದೇವಾಲಯ ಇರುವುದು ಮೈಸೂರಿನಲ್ಲಿ ಮಾತ್ರ. ಅದೂ ಅರಮನೆ ಆವರಣದಲ್ಲಿ. ಇಲ್ಲಿಯೂ ಇಲಾಖೆ ಸರಿಯಾಗಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿಲ್ಲ. ಹೀಗೆ ಅರಮನೆ ಆವರಣದಲ್ಲಿ ಪ್ರವಾಸಿಗರ ಆಕರ್ಷಣೆಗೆ ಹಲವು ದಾರಿಗಳಿದ್ದರೂ ಎಲ್ಲವೂ ಮುಚ್ಚಿದಂತೆಯೇ ಇದೆ. ಇಂತಹ ಸಂದರ್ಭದಲ್ಲಿ ಮೈಸೂರಿಗೆ ಬರುವ ಪ್ರವಾಸಿಗರು ದಿನವಿಡಿ ಮೈಸೂರಿನಲ್ಲಿ ಉಳಿಯಲು ಹೇಗೆ ಸಾಧ್ಯ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement