ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅನಿಲ ಕೊಳವೆ ಕಾಮಗಾರಿ ನಡೆಸದಂತೆ ಡಿಸಿ ಸೂಚನೆ

Rashmi Kasaragodu
Updated On : 6 Jun 2014, 1:50 am

ಕೆ.ಆರ್. ನಗರ: ತಾಲೂಕು ವ್ಯಾಪ್ತಿಯಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಯವರು ರೈತರ ಜಮೀನಿನಲ್ಲಿ ಕೈಗೊಂಡಿರುವ ಅನಿಲ ಸಾಗಣೆ ಕೊಳವೆ ಮಾರ್ಗದ ಕಾಮಗಾರಿಯನ್ನು ಪರಿಹಾರ ನೀಡುವವರೆಗೂ ಮುಂದುವರಿಸದಂತೆ ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಕಂಪನಿ ಅಧಿಕಾರಿಗಳಿಗೆ ಆದೇಶಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಸಾ.ರಾ.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪನಿ ಅಧಿಕಾರಿಗಳು, ಕಾಮಗಾರಿಗೆ ಭೂಮಿ ಕಳೆದುಕೊಳ್ಳಲಿರುವ ರೈತರು ಮತ್ತು ತಾಲೂಕಿನ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಈ ಸೂಚನೆ ನೀಡಿದರು.
ರೈತರ ಜಮೀನಿಗೆ ಕಂದಾಯ ಇಲಾಖೆ ನಿಗದಿ ಮಾಡುವ ನಾಲ್ಕು ಪಟ್ಟು ಹಣವನ್ನು ನೀಡಲು ಈ ಹಿಂದೆ ಕಂಪನಿ ತೀರ್ಮಾನಿಸಿತ್ತು. ಆದರೆ ಇದಕ್ಕೊಪ್ಪದ ಶಾಸಕ ಸಾ.ರಾ. ಮಹೇಶ್ ಆರು ಪಟ್ಟು ಹಣ ನೀಡಬೇಕೆಂದು ಸಭೆಯಲ್ಲಿ ಆಗ್ರಹಿಸಿದರು. ಇಲ್ಲವಾದಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳು, ಶಾಸಕರು ಮತ್ತು ಕಂಪನಿಯ ಅಧಿಕಾರಿಗಳು ಪರಸ್ಪರ ಚರ್ಚಿಸಿ ಶಾಸಕರ ಬೇಡಿಕೆಗೆ ಸ್ಪಂದಿಸಿ ಕಂದಾಯ ಇಲಾಖೆ ನಿಗದಿಪಡಿಸುವ ಹಣದ ಆರು ಪಟ್ಟು ಪರಿಹಾರ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಆದರೆ ಪರಿಹಾರದ ಹಣ ನೀಡಲು ಕಂಪನಿಯ ಆಡಳಿತಾತ್ಮಕ ಮಂಜೂರಾತಿ ಪಡೆಯಬೇಕಿರುವುದರಿಂದ ಹತ್ತು ದಿನಗಳ ಕಾಲಾವಕಾಶ ಬೇಕೆಂದು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಯ ಅಧಿಕಾರಿಗಳು ಮನವಿ ಮಾಡಿದಾಗ ಸಭೆ ಇದಕ್ಕೆ ಸಮ್ಮತಿ ಸೂಚಿಸಿತು.
ಅನಿಲ ಕೊಳವೆ ಕಾಮಗಾರಿ ಮುಗಿದ ನಂತರ ಆ ಜಾಗದ ಮಾಲೀಕತ್ವವನ್ನು ಮತ್ತೆ ರೈತರಿಗೆ ನೀಡಬೇಕು ಹಾಗೂ ಆ ಸ್ಥಳದಲ್ಲಿ ಬೆಳೆ ಬೆಳೆಯಲು ಅವಕಾಶ ಕಲ್ಪಿಸಬೇಕೆಂದು ಶಾಸಕರು ಸೂಚಿಸಿದಾಗ ಇದಕ್ಕೆ ಅಧಿಕಾರಿಗಳು ತಮ್ಮ ಒಪ್ಪಿಗೆ ನೀಡಿದರು. ಜಿಪಂ ಸದಸ್ಯ ಸಿ.ಜೆ.ದ್ವಾರಕೀಶ್, ಜಿಲ್ಲಾ ಉಪನೋಂದಣಾಧಿಕಾರಿ ಹಂಸವೇಣಿ, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಅಧೀಕ್ಷಕ ಎಂಜಿನಿಯರ್ ರವಿ, ವಿಭಾಗಾಧಿಕಾರಿ ಚೇತನ್, ಹುಣಸೂರು ಉಪವಿಭಾಗಾಧಿಕಾರಿ ಜಗದೀಶ್, ಕಾಮಗಾರಿಗೆ ಜಮೀನು ನೀಡಲಿರುವ ಗ್ರಾಮಗಳ ವ್ಯಾಪ್ತಿಯ ರೈತರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement