ಆಮೆಗತಿ ಕಾಮಗಾರಿಗೆ ಮುಂಗಾರು ಅಡ್ಡಿ
ಟಿ.ಎಲ್. ಶ್ರೀನಿವಾಸ್
ಗೋಣಿಕೊಪ್ಪಲು: ಹುಣಸೂರು, ಪಿರಿಯಾಪಟ್ಟಣ ಲೋಕೋಪಯೋಗಿ ಇಲಾಖೆಯ ಉಸ್ತುವಾರಿಗೆ ಒಳಪಡುವ ಹುಣಸೂರು- ಆನೆಚೌಕೂರು ರಸ್ತೆ ಕಾಮಗಾರಿ ಮತ್ತೆ ಸ್ಥಗಿತಗೊಳ್ಳುವ ಲಕ್ಷಣ ಕಾಣುತ್ತಿದೆ.
ಬೇಸಿಗೆಗೂ ಮುನ್ನ ಹುಣಸೂರು- ತಲಕಾವೇರಿ ರಾಜ್ಯ ಹೆದ್ದಾರಿ 90ರ ಅಭಿವೃದ್ಧಿ ಕಾಮಗಾರಿ ಮುಗಿಯಲಿದೆ ಎಂದು ಸಂಬಂಧಿಸಿದ ಜನಪ್ರತಿನಿಧಿಗಳು ಚುನಾವಣೆಗೂ ಮುನ್ನ ಭರವಸೆ ನೀಡಿದ್ದರು. ಇದೀಗ ಹುಣಸೂರು ಲೋಕೋಪಯೋಗಿ ವ್ಯಾಪ್ತಿಯ 9.08 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಪಿರಿಯಾಪಟ್ಟಣ ಲೋಕೋಪಯೋಗಿ ಸುಪರ್ದಿಯ ಸುಮಾರು 11 ಕಿ.ಮೀ. ರಸ್ತೆ ಡಾಂಬರೀಕರಣ ಮೇ 30ರಿಂದ ಕರಣಕುಪ್ಪೆ ಎಂಬಲ್ಲಿಂದ ಪ್ರಾರಂಭಗೊಂಡಿದ್ದರೂ, ಮುಂಗಾರು ಸನ್ನಿಹಿತವಾಗುವ ಲಕ್ಷಣ ಕಾಣುತ್ತಿರುವ ಹಿನ್ನೆಲೆ ಮತ್ತೆ ಸ್ಥಗಿತಗೊಳ್ಳುವ ಸಾಧ್ಯತೆ ಕಂಡು ಬಂದಿದೆ.
ಈ ಹಿಂದೆ ರಸ್ತೆಯನ್ನು ಆನೆಚೌಕೂರುವರೆಗೆ ಜೆಸಿಬಿ ಮೂಲಕ ಸಮತಟ್ಟು ಮಾಡಲಾಗಿತ್ತು. ಇದೀಗ ಮತ್ತೆ ಕಚ್ಚಾ ರಸ್ತೆ ಹೊಂಡಗಳಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ವಾಹನ ಚಾಲಕರು ಜೀವ ಕೈಯಲ್ಲಿಡಿದು ವಾಹನ ಚಲಾಯಿಸಬೇಕಾಗಿದೆ.
ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ: ಹುಣಸೂರು- ಆನೆಚೌಕೂರು ಕಾಮಗಾರಿಯನ್ನು ಆಂಧ್ರ ಮೂಲದ ಕಂಪನಿಗೆ ಸುಮಾರು 31 ಕೋಟಿ ಅನುದಾನ ಒದಗಿಸುವ ಮೂಲಕ ಗುತ್ತಿಗೆ ನೀಡಲಾಗಿದೆ. ಅಧಿಕಾರಿಗಳು ಹಾಗೂ ಈ ವಿಭಾಗದ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವೇ ಕಾಮಗಾರಿ ಆಮೆಗತಿಗೆ ಕಾರಣ ಎನ್ನಲಾಗಿದೆ. ಉದ್ದೇಶಿತ ಕಾಮಗಾರಿಗೆ ವ್ಯವಸ್ಥೆಯಾಗಿದ್ದ ಜಲ್ಲಿಯನ್ನು ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ರಾಜಕೀಯ ಪ್ರೇರಿತವಾಗಿ ಕೆ.ಆರ್. ನಗರಕ್ಕೆ ಸಾಗಿಸಿರುವುದು ಕಾಮಗಾರಿ ವಿಳಂಬಕ್ಕೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ.
ಜೆಲ್ಲಿ ಕಲ್ಲು ಸಮಸ್ಯೆ: ಇದೀಗ ಕರಣಕುಪ್ಪೆಯಿಂದ ರಸ್ತೆ ಡಾಂಬರೀಕರಣ ಕಾಮಗಾರಿ ಆರಂಭಗೊಂಡಿದ್ದರೂ ಜಲ್ಲಿ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಸುಮಾರು 2 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ಸಾಕಾಗುವಷ್ಟು ಜಲ್ಲಿಯಷ್ಟೇ ದಾಸ್ತಾನಿದೆ. ಪಿರಿಯಾಪಟ್ಟಣ ಲೋಕೋಪಯೋಗಿ ಇಲಾಖೆಯ ನೂತನ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್. ಪ್ರಕಾಶ್, ಲೋಕಸಭಾ ಚುನಾವಣೆ ಹಿನ್ನೆಲೆ ಕಾಮಗಾರಿ ವಿಳಂಬವಾಗಿದೆ. ಮುಂಗಾರು ಮಳೆ ಬಿಡುವು ನೀಡಿದಲ್ಲಿ ಕಾಮಗಾರಿ ಸ್ಥಗಿತಗೊಳಿಸದೆ ಮುಂದುವರಿಸಲಾಗುವುದ ಎನ್ನುತ್ತಾರೆ.
ಬಿಲ್ ಬಾಕಿ: ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದ ಅನ್ವಯ ಪಿರಿಯಾಪಟ್ಟಣ- ಆನೆಚೌಕೂರು ಸುಮಾರು 9 ಕಿ.ಮೀ. ರಸ್ತೆ ಅಭಿವೃದ್ಧಿಗೆ ಅನುದಾನ ತರುವ ನಿಟ್ಟಿನಲ್ಲಿಯೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುಣಸೂರು- ಆನೆಚೌಕೂರು ಕಾಮಗಾರಿಗೆ 31 ಕೋಟಿ ಬಿಲ್ ಬಾಕಿ ಇರುವುದೂ ನಿಧಾನಗತಿಗೆ ಕಾರಣ ಎನ್ನುತ್ತಾರೆ ಪ್ರಕಾಶ್.
ಗೋಣಿಕೊಪ್ಪಲು-ವಿರಾಜಪೇಟೆ ರಸ್ತೆಯು ಸುಮಾರು 17.25 ಕಿ.ಮೀ. ಅಭಿವೃದ್ಧಿಗೊಳ್ಳಬೇಕಿದ್ದು, ವಿರಾಜಪೇಟೆಯ ಪಂಜರ ಪೇಟೆಯಲ್ಲಿ ಕಾಮಗಾರಿ ಸ್ವಲ್ಪ ಬಾಕಿ ಇದೆ. ಕಡಂಗದಲ್ಲಿ 2 ಕಿ.ಮೀ, ವಿರಾಜಪೇಟೆ ನಗರ ಸಂಪರ್ಕ ರಸ್ತೆ ಪಂಜರಪೇಟೆಯಿಂದ ಸುಮಾರು 700 ಮೀಟರ್ ರಸ್ತೆ ಕಾಮಗಾರಿ ಬಾಕಿ ಇದೆ. ಗೋಣಿಕೊಪ್ಪಲು- ವಿರಾಜಪೇಟೆ ರಸ್ತೆ ಸುಮಾರು 7 ಮೀಟರ್ ಅಗಲವಿದ್ದು, ಪಂಜರಪೇಟೆಯಿಂದ ಒಟ್ಟು 14.50 ಮೀಟರ್ ಅಗಲಗೊಳ್ಳಲಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ.
ಇಲಾಖೆಗಳ ದ್ವಂದ್ವ: ಈ ವಿಭಾಗದಲ್ಲಿ ಹಲವು ವಿದ್ಯುತ್ ಕಂಬಗಳನ್ನು ಶೀಘ್ರ ತೆರವುಗೊಳಿಸಬೇಕಾದ ಅಗತ್ಯವಿದ್ದು, ಸೆಸ್ಕ್ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ನಡುವೆ ಶೀತಲ ಸಮರ ಆರಂಭಗೊಂಡಿದೆ.
ಸುಮಾರು 24 ಕೋಟಿ ವೆಚ್ಚದ ರಾಜ್ಯ ಹೆದ್ದಾರಿ ಅನುದಾನದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಇಬ್ಬದಿ ಚರಂಡಿ ಹಾಗೂ ರಸ್ತೆಗೆ ಬಿಳಿ ಬಣ್ಣದಿಂದ ಗುರುತಿಸುವ ಕಾಮಗಾರಿ ಬಾಕಿ ಉಳಿದಿದೆ. ಚರಂಡಿ ಕಾಮಗಾರಿ ಗೋಣಿಕೊಪ್ಪಲಿನಿಂದ ಇದೀಗ ಆರಂಭಗೊಂಡಿದೆ ಎಂದು ವಿರಾಜಪೇಟೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ತಿಳಿಸಿದ್ದಾರೆ.
ನೂತನ ಸಂಸದ ಪ್ರತಾಪ್ ಪ್ರಶಂಸೆ
ವಿರಾಜಪೇಟೆಗೆ ಇತ್ತೀಚೆಗೆ ಬಂದ್ದಿದ್ದ ನೂತನ ಸಂಸದ ಪ್ರತಾಪ್ ಸಿಂಹ, ಕೊಡಗು ಜಿಲ್ಲೆಯ ರಸ್ತೆಗಳು ಅತ್ಯುತ್ತಮವಾಗಿದೆ. ಗ್ರಾಮೀಣ ರಸ್ತೆ, ಕಾಂಕ್ರಿಟ್ ರಸ್ತೆ ಹಾಗೂ ಜಿ.ಪಂ, ಲೋಕೋಪಯೋಗಿ ಇಲಾಖೆಯ ರಸ್ತೆಗಳು ಇಲ್ಲಿ ಉತ್ತಮವಾಗಿದೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಿರಿಯಾಪಟ್ಟಣ, ಹುಣಸೂರು ಹಾಗೂ ಮುಖ್ಯಮಂತ್ರಿ ಕ್ಷೇತ್ರವಾದ ಚಾಮುಂಡೇಶ್ವರಿ ಕ್ಷೇತ್ರದ ರಸ್ತೆ ತೀರಾ ದುಸ್ಥಿಯಲ್ಲಿದ್ದು ಅಲ್ಲಿನ ಅಭಿವೃದ್ಧಿಗೂ ಒತ್ತು ನೀಡುವುದಾಗಿ ಭರವಸೆ ನೀಡಿದ್ದಾರೆ.