ಖಾತ್ರಿ ಯೋಜನೆಯಲ್ಲಿ ಕೆಲಸ ಕೊಡಿ
ಟಿ. ನರಸೀಪುರ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ನೀಡುವಂತೆ ಆಗ್ರಹಿಸಿ ತಾಲೂಕಿನ ಆಲಗೂಡು ಗ್ರಾಪಂ ಎದುರು ಮಹಿಳಾ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ಗುರುವಾರ ಪ್ರತಿಭಟಿಸಿದರು.
ತಾಲೂಕಿನ ಆಲಗೂಡು ಗ್ರಾಪಂ ಕಚೇರಿ ಎದುರು ಧರಣಿ ನಡೆಸಿದ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಅರ್ಜಿ ಸ್ವೀಕರಿಸದ ಗ್ರಾಪಂ ಆಡಳಿತ, ದುಡಿಯುವ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಡಿವೈಎಫ್‌ಐ ತಾಲೂಕು ಅಧ್ಯಕ್ಷ ಸಿ.ಪುಟ್ಟಮಲ್ಲಯ್ಯ ಮಾತನಾಡಿ, ಆಲಗೂಡು ಗ್ರಾಮದಲ್ಲಿ ಬದುಕಲು ಕೂಲಿ ಕೆಲಸ ಅವಲಂಬಿಸಿರುವ ಕುಟುಂಬಗಳಿಗೆ ಖಾತರಿ ಯೋಜನೆಯಡಿ ಗ್ರಾಪಂ ಉದ್ಯೋಗ ನೀಡುತ್ತಿಲ್ಲ. ಕಳೆದ ಮೇ 29 ಮತ್ತು ಜೂ.3 ರಂದು ಮಾಡಿದ ಮನವಿಗೂ ಬೆಲೆ ನೀಡಿಲ್ಲ ಎಂದು ಆರೋಪಿಸಿದರು. ಈಗಲಾದರೂ ಅರ್ಜಿ ಸ್ವೀಕರಿಸಿ, ಉದ್ಯೋಗ ನೀಡದಿದ್ದರೆ ತಾಪಂ ಮತ್ತು ಜಿಪಂ ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಪಂ ಅಧಿಕಾರಿ ಜಿ.ವೆಂಕಟಸುಬ್ಬನ್ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಮಹಾಲಕ್ಷ್ಮೀ, ಚಿಕ್ಕತಾಯಮ್ಮ, ಸಿದ್ದಮ್ಮ, ಸುಮಿತ್ರ, ಲಕ್ಷ್ಮಮ್ಮ, ಸರೋಜಮ್ಮ, ರತ್ನಮ್ಮ, ಜಯಮ್ಮ, ಶೀಲಾ, ಮಲ್ಲಾಜಮ್ಮ, ಮಂಗಳಮ್ಮ ಮಹದೇವ, ದೊಡ್ದಮ್ಮ ಇದ್ದರು.