ನಮ್ಮ ಸ್ವಾರ್ಥಕ್ಕೆ ಪರಿಸರ ನಾಶ: ಯೋಗೀಶ್
ಸುತ್ತೂರು: ನಮ್ಮ ಆಸೆ ಆಕಾಂಕ್ಷೆಗಳಿಗಾಗಿ ಪರಿಸರ ನಾಶ ಮಾಡುತ್ತಿದ್ದೇವೆ ಎಂದು ಜಲಾನಯನ ಅಭಿವೃದ್ಧಿ ತರಬೇತಿ ಕೇಂದ್ರದ ಉಪ ನಿರ್ದೇಶಕ ಜಿ.ಎಚ್. ಯೋಗೀಶ್ ಹೇಳಿದರು.
ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ರೋಟರಿ ಮೈಸೂರು ಉತ್ತರ ಹಾಗೂ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಂಜನಗೂಡು ತಾಲೂಕು ಬಸವನಪುರ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದಲ್ಲಿ ಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ನಮ್ಮ ಆಸೆ ಆಕಾಂಕ್ಷೆಗಳಿಗಾಗಿ ಪರಿಸರ ನಾಶ ಮಾಡುತ್ತಿದ್ದೇವೆ. ಇದರ ಪರಿಣಾಮವನ್ನು ಮುಂದಿನ ಪೀಳಿಗೆ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣ ಆಗುವುದರಲ್ಲಿ ಸಂದೇಹ ಇಲ್ಲ. ಕೃಷಿಯಲ್ಲಿ ರಾಸಾಯನಿಕ ಬಳಸಿ ಪರಿಸರ ಕಲುಷಿತಗೊಳಿಸುತ್ತಿದ್ದೇವೆ. ಅದರ ಬದಲಿಗೆ ಸಾವಯವ ಪದ್ಧತಿ ಅಳವಡಿಸಿಕೊಂಡು ಕಲುಷಿತ ನಿಯಂತ್ರಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಅರುಣ್ ಬಳಮಟ್ಟಿ, ದನಿಯನ್ನು ಎತ್ತರಿಸಿ, ಸಮುದ್ರ ಮಟ್ಟವನ್ನಲ್ಲ ಎಂಬುದು ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಧ್ಯೇಯವಾಕ್ಯ. ಆದ್ದರಿಂದ ಎಲ್ಲರೂ ಪರಿಸರವನ್ನು ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.
ರೋಟರಿ ಮೈಸೂರು ಉತ್ತರ ಸಂಸ್ಥೆಯ ಡಾ.ಗೊ.ರು.ಪರಮೇಶ್ವರಪ್ಪ ಮಾತನಾಡಿ, ಭಾರತದಲ್ಲಿ ಹಿಂದಿನಿಂದಲೂ ಪರಿಸರ ಸಂರಕ್ಷಣೆ ನಡೆದು ಬಂದಿದೆ. ಇನ್ನು ಮುಂದೆಯು ಪರಿಸರ ಸಂರಕ್ಷಿಸಲು ಹೆಚ್ಚು ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಮೈಸೂರು ಉತ್ತರ ಅಧ್ಯಕ್ಷ ಜಿ. ಶಿವಲಿಂಗಸ್ವಾಮಿ, ನಂಜನಗೂಡು ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಜಿ.ರಾಮಚಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವನಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು, ರೈತ ಮಹಿಳೆಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.