ಪೊಲೀಸ್ ಆಯುಕ್ತರ ವಿರುದ್ಧ ಸಿಟ್ಟಾದ್ರು ಚಾಲಕರು
ಮೈಸೂರು: ಶಾಲಾ ವಾಹನಗಳಿಗೆ ಹಲವಾರು ನಿರ್ಬಂಧ ಹೇರಿರುವ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ವಿರುದ್ಧ ಜಿಲ್ಲಾ ಶಾಲಾ ವಾಹನ ಚಾಲಕರು ಮತ್ತು ಮಾಲೀಕರ ಸಂಘದವರು ಗುರುವಾರ ಪ್ರತಿಭಟಿಸಿದರು.
ನಗರದ ಜಯಲಕ್ಷ್ಮಿಪುರಂನಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ನಿವಾಸದ ಎದುರು ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಅವರು ಪೊಲೀಸ್ ಆಯುಕ್ತರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ದೆಹಲಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಮನವಿ ಸಲ್ಲಿಸಿದರು.
ವಾಹನಗಳು ಹಳದಿ ಬಣ್ಣ ಹೊಂದಿರಬೇಕು ಎಂದು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಆದರೆ, ಹಳದಿ ಬಣ್ಣದ ವಾಹನಗಳಿಂದ ನಮಗೆ ತೊಂದರೆ ಆಗುತ್ತಿದೆ. ವರ್ಷಕ್ಕೆ 10,000 ವಿಮೆ ಹಾಗೂ ವರ್ಷಕ್ಕೆ ಎಫ್ಸಿ ಮಾಡಿಸಬೇಕು. ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿಸಬೇಕು. ಆದರೆ, ಶಾಲಾ ಮಕ್ಕಳ ಪೋಷಕರು ಕೊಡುವ ಹಣ ಕಡಿಮೆ ಆಗಿದೆ. ಸೀಟ್ ನಿಗದಿಯಿಂದಾಗಿ ನಮಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಶಾಲಾ ವಾಹನಗಳಿಗೆ ನಿರ್ಬಂಧ ವಿಧಿಸಿಲ್ಲ. ಆದರೆ, ಮೈಸೂರಿನಲ್ಲಿ ನಿಯಮ ಜಾರಿ ಮೂಲಕ ತೊಂದರೆ ನೀಡುತ್ತಿರುವುದು ಸರಿಯಲ್ಲ. ಸರ್ಕಾರವು ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿದೆ. ಆದರೆ, ಸ್ವಯಂ ಉದ್ಯೋಗ ಕಂಡುಕೊಂಡಿರುವ ವಾಹನ ಚಾಲಕರು ಮತ್ತು ಮಾಲೀಕರಿಗೆ ಪೊಲೀಸರು ನಿಯಮಗಳ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.