ಅನಂತಮೂರ್ತಿಗೆ ಬಸವಶ್ರೀ ಪ್ರಶಸ್ತಿ ದುರದೃಷ್ಟಕರ
ಮೈಸೂರು: ಬಸವಾದಿ ಶರಣರ ಸಾರ್ವತ್ರಿಕ ಮೌಲ್ಯಯುತ ವಚನ ಸಾಹಿತ್ಯದ ಬಗ್ಗೆ ಯಾರು ಅಧ್ಯಯನ, ಅಧ್ಯಾಪನ, ಸಂಶೋಧನೆ ಹಾಗೂ ಶರಣ ಪಥಕ್ಕನುಸಾರವಾಗಿ ಜೀವನ ಸಾಧನೆ ಮಾಡಿರುತ್ತಾರೋ ಅಂತವರಿಗೆ ಬಸವಶ್ರೀ ಪ್ರಶಸ್ತಿ ನೀಡದೆ ಸಾಹಿತಿ ಪ್ರೊ.ಯು.ಆರ್. ಅನಂತಮೂರ್ತಿ ಅವರಿಗೆ ನೀಡಿರುವುದು ದುರದೃಷ್ಟಕರ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಸ್.ಶಿವರಾಜಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬುದ್ಧ, ಬಸವ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್, ಗಾಂಧಿ ಮುಂತಾದವರು ಜನಸಮಾನಸದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿ ಮಹಾತ್ಮರೆನಿಸಿಕೊಂಡವರು. ಅದರಲ್ಲೂ ಬಸವಣ್ಣ- ಎನ್ನ ಹಾರುವನೆಂದರೆ ಕೂಡಲಸಂಗಮದೇವ ನಗುವನಯ್ಯಾ, ತಲೆದಂಡ ತಲೆದಂಡ ಎಂದು ಹೇಳಿ ಸ್ವತಃ ನಡೆದುಕೊಂಡು ಬೇರೆಯವರನ್ನು ಆ ದಿಕ್ಕಿನಲ್ಲಿ ಸಾಗುವಂತೆ ಪ್ರೇರೇಪಿಸಿದ ಸಮಾಜ ಸುಧಾಕರು. ಇವರ ಚಿಂತನೆಯ ಔನ್ನತ್ಯವನ್ನು ಗಳಿಸದ ಅನಂತಮೂರ್ತಿ ಅವರು ಬಸವ್ ಈಜ್ ಎ ನಾನ್ಸೆನ್ಸ್ ಫಿಲಾಸಫರ್ ಎಂದಿರುವುದು ಅವರ ಅಜ್ಞಾನದ ಆಳವನ್ನು ತೋರಿಸುವಂತಿದೆ. ಬಸವಶ್ರೀ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಬೇಕಾದವರು ಕುಗ್ಗಿಸಿದರಲ್ಲ ಎಂಬ ನೋವು, ಸಂಕಟ ಮತ್ತು ವಿಷಾದ ಕರ್ನಾಟಕದ ಜನರನ್ನು ಕಾಡುತ್ತಿದೆ. ಇದಕ್ಕೆ ಆಯ್ಕೆ ಸಮಿತಿ ಉತ್ತರವೇನು ಎಂದು ಅವರು ಪ್ರಶ್ನಿಸಿದ್ದಾರೆ.