ಕಾವೇರಿಗಾಗಿ ಪಕ್ಷಾತೀತ ಹೋರಾಟ ಅಗತ್ಯ
ಕ.ಪ್ರ.ವಾರ್ತೆ ಮೈಸೂರು ಜೂ.7
ಕೇಂದ್ರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರ ರಾಜ್ಯಸಭೆಯಲ್ಲಿ ತಮಿಳುನಾಡಿನ ಬೆಂಬಲ ಪಡೆಯುವ ಸಲುವಾಗಿ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಗೆ ಮುಂದಾಗಿದ್ದು, ಇದನ್ನು ತಡೆಯುವ ಸಲುವಾಗಿ ರಾಜ್ಯದ 28 ಸಂಸದರು ಪಕ್ಷಾತೀತವಾಗಿ ಹೋರಾಟ ನಡೆಸಬೇಕು ಎಂದು ಕಾವೇರಿ ತಾಂತ್ರಿಕ ಸಲಹಾ ಸಮಿತಿ ಒತ್ತಾಯಿಸಿದೆ.
ಶನಿವಾರ ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸಿದಲ್ಲಿ ಕರ್ನಾಟಕಕ್ಕೆ ಆಗುವ ತೊಂದರೆ ಹಾಗೂ ಹಳೆ ಮೈಸೂರು ಭಾಗದ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಜಿಲ್ಲೆಗಳಿಗೆ ಎದುರಾಗುವ ಸಮಸ್ಯೆ ಬಗ್ಗೆ ಕೂಲಂಕುಷವಾಗಿ ಪೇಪರ್ ಪ್ರೆಸೆಂಟೇಷನ್ ಮಾಡಲಾಯಿತು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ವರದಿ ಸಲ್ಲಿಸಲು ತೀರ್ಮಾನಿಸಲಾಯಿತು. ಇದೇ ವೇಳೆ ಸಲಹಾ ಸಮಿತಿ ಸದಸ್ಯ ಎಂ.ಲಕ್ಷ್ಮಣ್ ಮಾತನಾಡಿ, ಒಂದು ವೇಳೆ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಯಾದರೆ ಕರ್ನಾಟಕಕ್ಕೆ ಮರಣಶಾಸನ ಬರೆದಂತೆ. ಈ ವಿಚಾರ ಜೀವ ಪಡೆದು ಮೂರು ದಿನಗಳಾಗಿದ್ದರೂ ಈ ಭಾಗದ ಯಾವ ಸಂಸದರು ತುಟಿ ಬಿಚ್ಚುತ್ತಿಲ್ಲ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ನಡೆ ನೋಡಿ ಅಭಿಪ್ರಾಯ ತಿಳಿಸುತ್ತೇವೆ ಎನ್ನುತ್ತಾರೆ.
ಆದ್ದರಿಂದ ಈ ಕೂಡಲೇ ಎಲ್ಲಾ ಸಂಸದರು ಒಟ್ಟಾಗಿ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂನಲ್ಲಿ ನಾಲ್ಕು ರಾಜ್ಯಗಳ ವ್ಯಾಜ್ಯಗಳು ಇತ್ಯರ್ಥವಾಗಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ನಿರ್ವಹಣಾ ಮಂಡಳಿ ರಚಿಸಬಾರದು ಎಂಬ ಒಕ್ಕೊರಲ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ನಿವೃತ್ತ ಎಂಜಿನಿಯರುಗಳಾದ ಅಯ್ಯರ್, ಮುರಳೀಧರ್, ಮಹದೇವಸ್ವಾಮಿ, ಎಂಜಿನಿಯರುಗಳ ಸಂಸ್ಥೆ ಅಧ್ಯಕ್ಷ ಡಾ.ಟಿ.ಅನಂತಪದ್ಮನಾಭ, ಕಾರ್ಯಕರ್ತ ಕುರುಬಾರಹಳ್ಳಿ ಪ್ರಕಾಶ್ ಇದ್ದರು.