ಟೆಂಡರ್ ಆರಂಭ
ಕೆ.ಆರ್. ನಗರ: ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಕಾರ್ಯ ಪುನರಾರಂಭಿಸಲು ನಾನು ಮತ್ತು ಸಂಸದ ಸಿ.ಎಸ್.ಪುಟ್ಟರಾಜು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಈಗಾಗಲೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಟೆಂಡರ್ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು ಟೆಂಡರ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಸಂಸದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆದರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಆರಂಭಿಸುವುದನ್ನು ನಿಲ್ಲಿಸಲು ಕಾಣದ ಕೈಗಳು ಕೈವಾಡ ನಡೆಸುತ್ತಿವೆ ಎಂಬ ಗಂಭೀರ ಆರೋಪ ಮಾಡಿದ ಅವರು, ಯಾರು ಏನೇ ಮಾಡಿದರು ಕಾರ್ಖಾನೆ ಆರಂಭಿಸುವುದು ಖಚಿತ ಎಂದು ತಿಳಿಸಿದರು.
ಯುವಜನ ಶಿಬಿರ
ಸುತ್ತೂರು: ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರಿ ಧಾರ್ಮಿಕ ದತ್ತಿ ಮತ್ತು ಜೆಎಸ್‌ಎಸ್ ಮಹಾವಿದ್ಯಾಪೀಠದ ಸಂಯುಕ್ತಾಶ್ರಯದಲ್ಲಿ ಜೂ.9 ರಿಂದ 12 ರವರೆಗೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಗ್ರಾಮೀಣ ಯುವಜನರಿಗಾಗಿ ಶಿಬಿರವು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಸಾನ್ನಿಧ್ಯ, ಸಿದ್ಧೇಶ್ವರ ಸ್ವಾಮೀಜಿಗಳ ಸಮ್ಮುಖದಲ್ಲಿ ಜರುಗಲಿದೆ. ಜೂ.9 ರಂದು ಶಿಬಿರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕಿ ಡಾ.ಅಮಿತಾಪ್ರಸಾದ್ ಉದ್ಘಾಟಿಸುವರು. ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಲಿಯಂ ಡಿಸೋಜ ಭಾಗವಹಿಸುವರು. ಜೂ.12ರಂದು ನಡೆಯುವ ಶಿಬಿರದ ಸಮಾರೋಪ ಸಮಾರಂಭದ ಭಾಷಣಕಾರರಾಗಿ ಸುವರ್ಣಗ್ರಾಮ, ರಸ್ತೆ ಮತ್ತು ಸೇತುವೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ನಿರ್ದೇಶಕ ಭುವನಹಳ್ಳಿ ನಾಗರಾಜ್ ಆಗಮಿಸುವರು. ಎಚ್.ಎಸ್. ಅಶೋಕಾನಂದ್ ಅಧ್ಯಕ್ಷತೆ ವಹಿಸುವರು. ಸಿದ್ಧೇಶ್ವರ ಸ್ವಾಮೀಜಿಗಳಿಂದ ಎರಡು ದಿನ ಪ್ರವಚನವಿರುತ್ತದೆ.
ವಿದ್ಯಾರ್ಥಿನಿಲಯಕ್ಕೆ ಪ್ರವೇಶ
ನಂಜನಗೂಡು: ಪಟ್ಟಣ ಹಾಗೂ ಕಳಲೆಯಲ್ಲಿರುವ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯ ಹಾಗೂ ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಪಿಯುಸಿ, ಪದವಿ, ಡಿಪ್ಲೋಮ, ಐಟಿಐ ಕೋರ್ಸ್‌ಣನಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗ-1, 2ಎ, 2ಬಿ, 3ಎ, 3ಬಿ, ಎಸ್ಸಿ ಹಾಗೂ ಎಸ್ಟಿ ಅರ್ಹ ವಿದ್ಯಾರ್ಥಿಗಳಿಂದ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜೂ.25 ಕೊನೆ ದಿನ. ನಿಲಯ ಮೇಲ್ವಿಚಾರಕರಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯ ಜತೆಗೆ ಹಿಂದಿನ ವರ್ಷದ ಅಂಕಪಟ್ಟಿ ಹಾಗೂ ಜಾತಿ, ಆದಾಯ ಪ್ರಮಾಣ ಪತ್ರದ ದೃಢೀಕೃತ ನಕಲು ಪ್ರತಿಯನ್ನು ಲಗತ್ತಿಸಿ ಸಲ್ಲಿಸುವುದು ಎಂದು ನಂಜನಗೂಡು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ತಿಳಿಸಿದ್ದಾರೆ.
ರೈತರ ನೆರವಿಗೆ ಸರ್ಕಾರದ ಸಿದ್ಧತೆ
ಮೈಸೂರು: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಗತ್ಯ ಬಿತ್ತನೆಬೀಜ, ರಸಗೊಬ್ಬರ ಒದಗಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದರು. ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಮುಂಗಾರು ಉತ್ತಮವಾಗಿರಬಹುದು ಎಂಬ ಆಶಾಭಾವನೆ ಇದೆ. ಸರ್ಕಾರ ಈ ಸಂಬಂಧ ಹಮಾಮಾನ ಇಲಾಖೆಯಿಂದ ಮಾಹಿತಿ ಪಡೆದುಕೊಂಡಿದೆ. ಹೀಗಾಗಿ ರೈತರಿಗೆ ಬಿತ್ತನೆಬೀಜ, ರಸಗೊಬ್ಬರ ಪೂರೈಸುವಂತೆ ಕೃಷಿ ಇಲಾಖೆ ಕೋರಲಾಗಿದೆ. ಒಂದು ವೇಳೆ ಮಳೆ ಕೈಕೊಟ್ಟಲ್ಲಿ ಅಥವಾ ಅತಿವೃಷ್ಟಿಯಾದಲ್ಲಿ ಮಾತ್ರ ಕಂದಾಯ ಇಲಾಖೆ ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದರು. ಈಗಾಗಲೇ ಇಲಾಖಾ ವತಿಯಿಂದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳ ಸಭೆ ನಡೆಸಿ, ಜಿಲ್ಲಾವಾರು ಮಾಹಿತಿ ಸಂಗ್ರಹಿಸಲಾಗಿದೆ. ಅಗತ್ಯ ಸಲಹೆ, ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬ್ಯಾಂಕುಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಹುಣಸೂರು: ಸರ್ಕಾರದ ಎಸ್ಸಿ, ಎಸ್ಟಿ ವರ್ಗಗಳಿಗೆ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು ಬ್ಯಾಂಕುಗಳು ನಿರಾಕರಿಸುತ್ತಿವೆ. ಇಂತಹ ಬ್ಯಾಂಕುಗಳ ವಿರುದ್ಧ ಕ್ರಮ ಜರುಗಿಸುವಂತೆ ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಒತ್ತಾಯಿಸಿದರು. ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಎಸಿ ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಉಪವಿಭಾಗ ಮಟ್ಟದ ಸಭೆಯಲ್ಲಿ ಅಹವಾಲು ಸಲ್ಲಿಸಿದ ಅವರು, ಬ್ಯಾಂಕಿನ ವ್ಯವಸ್ಥಾಪಕರು ಸಾಲ ನೀಡಲು ನಿರಾಕರಿಸುತ್ತಿದ್ದಾರೆ. ಸಬೂಬು ಹೇಳಿ ಅಲೆದಾಡಿಸುತ್ತಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಬಿಎಲ್‌ಬಿಸಿ ಸಭೆಯಲ್ಲಿ ಹಾಗೂ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು.
ದಲಿತರ ಸ್ಮಶಾನ ರಕ್ಷಿಸಿ: ಉಪವಿಭಾಗದಲ್ಲಿ ಬಹುತೇಕ ಕಡೆಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲ. ಹಲವೆಡೆ ಇದ್ದರೂ ಅಭಿವೃದ್ಧಿಗೊಳಿಸಿಲ್ಲ. ಮೂಲಭೂತ ಸೌಲಭ್ಯಗಳಿಲ್ಲ, ಒತ್ತುವರಿಯಾಗಿದ್ದರೂ ಬಿಡಿಸಿಲ್ಲವೆಂಬ ಮುಖಂಡರ ಆರೋಪಕ್ಕೆ ಉಪ ವಿಭಾಗಾಧಿಕಾರಿಗಳು ಈ ಬಗ್ಗೆ ಎಲ್ಲಾ ಗ್ರಾಪಂ ಪಿಡಿಒಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು. ತಾಪಂ ಇಓ ಡಾ.ಪ್ರೇಮಕುಮಾರ್, ಸ್ಮಶಾನ ಅಭಿವೃದ್ಧಿಗಾಗಿ ನರೇಗಾ ಯೋಜನೆಯಡಿಯಲ್ಲಿ 3 ರಿಂದ 10 ಲಕ್ಷ ಖರ್ಚು ಮಾಡಬಹುದಾಗಿದೆ. ಪ್ರಥಮವಾಗಿ ಕಟ್ಟೆಮಳಲವಾಡಿ, ಮುಳ್ಳೂರು ಗ್ರಾಮವನ್ನು ಆಯ್ಕೆ ಮಾಡಲಾಗಿದೆ ಎಂದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.