ಡಾಕ್ಟರೇಟ್
ಮೈಸೂರು: ಡಾ.ಟಿ.ಎಸ್.ಜಗದೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಬಿ.ಎಸ್. ನಾಗೇಂದ್ರಾರಾಧ್ಯ ಅವರು ಸಾದಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ರೇಷ್ಮೆಕೃಷಿ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ಪದಕ ಪ್ರದಾನ
ಗುರಿಕಾರ್ ಮರಿಮಲ್ಲಪ್ಪನವರ ಸಂಸ್ಮರಣೋತ್ಸವದ ಅಂಗವಾಗಿ ಜೂ.9ರಂದು ಪದವಿ ಪೂರ್ವ ಪ್ರಶಸ್ತಿ 2014 ಮತ್ತು ಸ್ವರ್ಣ ಪದಕ ಪ್ರದಾನ ಸಮಾರಂಭ ನಡೆಯಲಿದೆ. ಅಂದು ಬೆಳಗ್ಗೆ 9.30ಕ್ಕೆ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಎಸ್.ಪರಮಶಿವಯ್ಯ ಅಧ್ಯಕ್ಷತೆ ವಹಿಸುವರು. ತುಮಕೂರು ವಿವಿ ಕುಲಪತಿ ಪ್ರೊ.ಎ.ಎಚ್. ರಾಜಾಸಾಬ್ ಪ್ರಶಸ್ತಿ ಪ್ರದಾನ ಮತ್ತು ಅಭಿನಂದನಾ ಭಾಷಣ ಮಾಡುವರು. ಪ್ರೊ.ಕೆ.ಎನ್. ಪಂಚಾಕ್ಷರಸ್ವಾಮಿ, ಕೆ.ಎಂ. ಪುಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವಿರೋಧ
ಕರ್ನಾಟಕಕ್ಕೆ ಮರಣ ಶಾಸನದಂತಿರುವ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಗೆ ಸರ್ವಜನಾಂಗ ಹಿತರಕ್ಷಣಾ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳ ವ್ಯಾಜ್ಯ ಸುಪ್ರೀಂ ಕೋರ್ಟ್ನಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಬೆಂಬಲ ಪಡೆಯುವ ಸಲುವಾಗಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಕೂಡಲೇ ವಿಧಾನ ಮಂಡಲದ ಉಭಯ ಸದನಗಳನ್ನು ಕರೆದು ಸರ್ವಪಕ್ಷ ನಿಯೋಗವನ್ನು ಕೇಂದ್ರಕ್ಕೆ ಕೊಂಡೊಯ್ಯಬೇಕು. ರಾಜ್ಯದ ನೆಲ, ಜಲ ವಿಷಯಗಳು ಬಂದಾಗ ಸರ್ವ ಪಕ್ಷಗಳು ಯಾವುದೇ ಒತ್ತಡಕ್ಕೆ ಮಣಿಯದೆ ಹೋರಾಡಲು ಸಜ್ಜಾಗಬೇಕು ಎಂದು ಅಧ್ಯಕ್ಷ ವೇಣುಗೋಪಾಲ್ ಮನವಿ ಮಾಡಿದ್ದಾರೆ. ರಾಜ್ಯದ ರೈತರು, ಪ್ರಗತಿಪರ ಸಂಘಟನೆಗಳು, ವಿಚಾರವಂತರು ಹಾಗೂ ಎಲ್ಲರೂ ಒಗ್ಗೂಡಿ ಚರ್ಚಿಸಿ ಹೋರಾಟಕ್ಕೆ ಇಳಿಯಬೇಕು. ಸರ್ವಜನಾಂಗ ಹಿತರಕ್ಷಣ ವೇದಿಕೆಯು ಇದರ ಬಗ್ಗೆ ಉಗ್ರವಾದ ಹೋರಾಟ ನಡೆಸಲಿದೆ ಎಂದಿದ್ದಾರೆ.
ಲ್ಯಾಬ್ ಉದ್ಘಾಟನೆ
ಐದು ದಿನದಲ್ಲಿ 200 ಮಂದಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡುತ್ತಿದ್ದು, ಇದು ವಿಶ್ವದಾಖಲೆಯಾಗಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದರು. ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 3.25 ಕೋಟಿ ವೆಚ್ಚದ ಹೊಸ ಕ್ಯಾತ್ಲ್ಯಾಬ್ ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಅಮೆರಿಕದ ಡಾ.ಸುಬ್ರಹ್ಮಣಿ ಹಾರ್ಟ್ ಫೌಂಡೇಶನ್, ಮೆಟ್ರಾನಿಕ್ ವ್ಯಾಕ್ಸುಲರ್ ಡಿವಿಜನ್ ಹಾಗೂ ಜಯದೇವ ಆಸ್ಪತ್ರೆ ಸಹಯೋಗದೊಂದಿಗೆ ನಡೆಯುತ್ತಿರುವ ಇಂಡೋ ಅಮೆರಿಕನ್ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರವು ಇಂದಿನಿಂದ ಪ್ರಾರಂಭವಾಗಿದ್ದು, ಇತ್ತೀಚೆಗೆ ಬಡವರಲ್ಲಿ, ಚಿಕ್ಕವಯಸ್ಸಿನಲ್ಲಿರುವ ಹೃದಯಾಘಾತ ಹೆಚ್ಚಾಗುತ್ತಿದೆ. ಸ್ಟಂಟ್ ಮತ್ತು ಆಪರೇಷನ್ ವೆಚ್ಚ ದುಬಾರಿಯಾಗಿರುವುದರಿಂದ ಉಚಿತವಾಗಿ ಬೆಂಗಳೂರಿನಲ್ಲಿ 165 ಹಾಗೂ ಮೈಸೂರಿನಲ್ಲಿ 35 ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡುತ್ತಿರುವುದಾಗಿ ತಿಳಿಸಿದರು. ಈ ಶಸ್ತ್ರಚಿಕಿತ್ಸೆಗೆ ತಗಲುವ ವೆಚ್ಚ 1.5 ಕೋಟಿ ವೆಚ್ಚದ ಸ್ಟಂಟ್ಗಳನ್ನು ಖರೀದಿಸಲು ಅಮೆರಿಕದ ಡಾ. ಸುಬ್ರಹ್ಮಣಿ ಅವರು ದೇಣಿಗೆ ನೀಡಿದ್ದಾರೆ. ಅವರಿಗಿರುವ ತಾಯ್ನಾಡಿನ ಪ್ರೇಮ, ಸೇವಾ ಮನೋಭಾವ ಹೊರದೇಶಗಳಲ್ಲಿರುವ ವೈದ್ಯರಿಗೆ ಆದರ್ಶಪ್ರಾಯವಾಗಿದೆ. ಡಾ.ಸುಬ್ರಹ್ಮಣಿ, ಡಾ.ದೇವರಾಜು ಅವರಂಥ ದಾನಿಗಳು ಹೆಚ್ಚಾಗಬೇಕು ಎಂದು ಧನ್ಯವಾದ ತಿಳಿಸಿದರು. ನಗರದ ಜಯದೇವಕ್ಕೆ ಹೊಸ ಕ್ಯಾತ್ಲ್ಯಾಬ್ ಬಂದಿರುವುದರಿಂದ ಈ ಯೂನಿಟ್ಗೆ ಹೊಸ ಮೆರಗು ಬಂದಿದ್ದು, ಒಂದು ದಿನಕ್ಕೆ ಇಪ್ಪತ್ತು ಜನರಿಗೆ ಆಪರೇಷನ್ ಮಾಡಬಹುದು. ಮೈಸೂರು ಸುತ್ತಮುತ್ತಲ ಜನರಿಗೆ ಇದರ ಉಪಯೋಗವಾಗಲಿದೆ. ಇದುವರೆಗೆ ಮೈಸೂರು ಜಯದೇವದಲ್ಲಿ ಹತ್ತೂವರೆ ಸಾವಿರ ಜನರಿಗೆ ಆಂಜಿಯೋಪ್ಲಾಸ್ಟಿ ಮತ್ತು ಆಂಜಿಯೋಗ್ರಾಂ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಅಮೆರಿಕದ ಡಾ. ಸುಬ್ರಹ್ಮಣಿ, ಡಾ. ದೇವರಾಜು, ಡಾ. ಸದಾನಂದ, ಡಾ. ಹರ್ಷ ಬಸಪ್ಪ, ಡಾ. ದಿವ್ಯ, ಡಾ. ಸಂತೋಷ್, ಅಧೀಕ್ಷಕಿ ಸಕ್ಕೂಬಾಯಿ, ಚಂಪಕಮಾಲಾ, ವೇಣುಗೋಪಾಲ್, ನಾಗರಾಜ್, ಗುರುಸ್ವಾಮಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.