ಶೂನ್ಯ ಫಲಿತಾಂಶ ಮಾಡಿದ ಶಾಲೆ ಮುಚ್ಚಿ
ಕ.ಪ್ರ.ವಾರ್ತೆ ಮೈಸೂರು ಜೂ.7
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದ ಇಟ್ಟಿಗೆಗೂಡಿನಲ್ಲಿರುವ ವಿಶ್ವೇಶ್ವರಯ್ಯ ಪ್ರೌಢಶಾಲೆಯನ್ನು ಮುಚ್ಚಿಸುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಂಬಂಧಪಟ್ಟ ಬಿಇಒಗೆ ಸೂಚಿಸಿದರು.
ಶನಿವಾರ ನಗರದ ಮಿನಿ ವಿಧಾನಸೌಧದಲ್ಲಿ ನಡೆದ ಮೈಸೂರು ತಾಲೂಕು ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಪ್ರಗತಿ ಪರಿಶೀಲನಾ ವೇಳೆ ಈ ಆದೇಶ ಹೊರಡಿಸಿದರು.
ಜಿಲ್ಲೆಯಲ್ಲಿ ಒಂದು ಶಾಲೆ ಶೂನ್ಯ ಫಲಿತಾಂಶ ಪಡೆದಿರುವುದು ಗೊತ್ತಾಗಿದೆ. ಅದರ ಸಮಸ್ಯೆ ಕೇಳಿದ ಶಾಸಕರಿಗೆ ದಕ್ಷಿಣ ವಲಯ ಬಿಇಒ ಬಿ.ಎನ್. ಶಿವರಾಮೇಗೌಡ ವಿವರಣೆ ನೀಡಿದರು. ಈ ಶಾಲೆಯು ಖಾಸಗಿಯವರಿಗೆ ಸೇರಿದ್ದಾಗಿದೆ. ಕಳೆದ ಬಾರಿ ಎಸ್ಸೆಸ್ಸೆಲ್ಸಿಗೆ ಕೇವಲ ಇಬ್ಬರು ವಿದ್ಯಾರ್ಥಿಗಳು ಕುಳಿತಿದ್ದರು. ಅವರಿಬ್ಬರೂ ಫೇಲಾಗಿದ್ದಾರೆ. ಶಾಲೆಯಲ್ಲಿ ಮೂಲ ಸೌಕರ್ಯ ಕೊರತೆ ಇರುವುದರಿಂದ ಈ ಬಾರಿ ಆ ಶಾಲೆಯನ್ನು ಮುಚ್ಚಿಸಲು ಸೂಚಿಸಿದ್ದೇನೆ ಎಂದಾಗ, ದಯವಿಟ್ಟು ಅದನ್ನು ಮುಚ್ಚಿಸಿ. ಅನುದಾನ ಕಡಿತಗೊಳಿಸಿ ಎಂದು ಶಾಸಕರು ತಿಳಿಸಿದರು.
ಆರ್ಟಿಇಗೆ ಸೇರುತ್ತಿಲ್ಲ: ತಾಲೂಕಿನಾದ್ಯಂತ ಸುಮಾರು 368 ಆರ್ಟಿಇನಡಿ ಬರುವ ಸೀಟುಗಳು ಖಾಲಿ ಉಳಿದಿವೆ ಎಂದು ಗ್ರಾಮಾಂತರ, ದಕ್ಷಿಣ ಹಾಗೂ ಉತ್ತರ ವಲಯ ಬಿಇಒಗಳು ಶಾಸಕರ ಗಮನಕ್ಕೆ ತಂದರು. ನಾವು ನೀಡಿದ ಶಾಲೆಗೆ ಸೇರಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎಂದರು. ಶಾಸಕರು ಮಾತನಾಡಿ, ನೀವು ಆರ್ಟಿಇನಡಿ ಅರ್ಜಿ ಸ್ವೀಕರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಒಂದೇ ಒಂದು ಸೀಟು ಖಾಲಿ ಉಳಿಯಬಾರದು. ಅರ್ಹರಿಗೆ ಸೀಟು ಕೊಡಿಸುವಂತೆ ಸೂಚಿಸಿದರು.
ತೋಟಗಾರಿಕೆಯು ಪುಷ್ಪೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕು. ಕನಿಷ್ಠ 20 ಗುಂಟೆಯಲ್ಲಿ ಹೂವು, ಹಣ್ಣು, ತರಕಾರಿ ಬೆಳೆಯುವ ರೈತರಿಗೆ ಉತ್ತೇಜನ ನೀಡಬೇಕು. ಸರ್ಕಾರದಿಂದ ಬರುವ ಸವಲತ್ತನ್ನು ಯಾವುದೇ ಕಾರಣಕ್ಕೂ ಉಳಿಸಿಕೊಳ್ಳಬಾರದು ಎಂದರು. ಇನ್ನು ಕೃಷಿ ಇಲಾಖೆಯವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ತಾಲೂಕಿನಾದ್ಯಂತ 45 ಸಾವಿರ ರೈತರಿದ್ದಾರೆ. ಅವರಲ್ಲಿ ಕೇವಲ 40 ಜನ ತಮ್ಮ ಜಮೀನುಗಳಿಗೆ ವಿಮೆ ಮಾಡಿಸಿದ್ದಾರೆ ಎಂದರೆ ಏನರ್ಥ. ನೀವು ಸರಿಯಾಗಿ ತಿಳಿವಳಿಕೆ ನೀಡದಿರುವುದು ವಿಫಲತೆಯನ್ನು ಎತ್ತು ತೋರಿಸುತ್ತದೆ. ಆದ್ದರಿಂದ ಮುಂದಿನ ಸಭೆಯೊಳಗೆ ಇವರ ರೈತರೆಲ್ಲರೂ ವಿಮಾ ಮಾಡಿಸಿರುವಂತೆ ನೋಡಿಕೊಳ್ಳಬೇಕು ಎಂದರು. ಮೈಸೂರು ತಾಪಂ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಸಿದ್ದಯ್ಯ, ಸದಸ್ಯ ಎಲ್.ಆರ್. ಮಹದೇವಸ್ವಾಮಿ, ಜಿಪಂ ಸದಸ್ಯೆ ಭಾಗ್ಯ ಶಿವಮೂರ್ತಿ, ತಾಪಂ ಇಒ ಅರುಳಕುಮಾರ್, ತಹಸೀಲ್ದಾರ್ ನವೀನ್ ಜೋಸೆಫ್ ಇದ್ದರು. ಒಟ್ಟು 29 ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸಭೆಗೆ ಪ್ರಗತಿ ಬಗೆಗೆ ಮಾಹಿತಿ ನೀಡಿದರು.