ಸಂಗೀತ ಗಣ್ಯರಿಗೆ ಹಡಪದ ಪ್ರಶಸ್ತಿ ಪ್ರದಾನ
ಮೈಸೂರು: ನಾಡಿನ ಇಬ್ಬರು ಸಂಗೀತಗಾರರಿಗೆ ಪಂಡಿತ್ ಕೆ.ಎಸ್.ಹಡಪದ ಪುಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.
ಗುರು ಪುಟ್ಟರಾಜ ಸಂಗೀತ ಸಭಾವು ದಿವಂಗತ ಕೆ.ಎಸ್. ಹಡಪದ ಹಾಗೂ ದಿವಂಗತ ಎಸ್.ಆರ್. ಕೃಷ್ಣಮೂರ್ತಿ ಅವರ ಸ್ಮರಣಾರ್ಥ ನಾದಬ್ರಹ್ಮ ಸಂಗೀತ ಸಭಾದಲ್ಲಿ ಏರ್ಪಡಿಸಿದ್ದ ಸಂಗೀತೋತ್ಸವದಲ್ಲಿ ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥ ಹಾಗೂ ಗಾಯಕ ಡಾ.ಅಶೋಕ ಹುಗ್ಗಣ್ಣವರ ಹಾಗೂ ಧಾರವಾಡದ ತಬಲ ವಾದಕ ಪಂಡಿತ್ ಅಲ್ಲಮ್ಮಪ್ರಭು ಕಡಕೋಳ ಅವರಿಗೆ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ವಿತರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಡಾ.ಸರ್ವಮಂಗಳಾ ಶಂಕರ್, ಭಾರತೀಯ ಸಂಗೀತ ಪರಂಪರೆಯಲ್ಲಿ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತಗಳು ಗಮಕ ಹೊರತುಪಡಿಸಿದರೆ ಉಳಿದೆಲ್ಲಾ ವಿಷಯದಲ್ಲಿ ಸಾಮೀಪ್ಯವಿದೆ ಎಂದರು.
ಸಂಗೀತ ಕಲೆ ರಮಣೀಯವಾದುದು. ಮಗು ಹುಟ್ಟಿದ ಸಂದರ್ಭದಲ್ಲಿಯೇ ತಾಯಿ ಜೋಗುಳದ ಹಾಡು ಆಡುವ ಮೂಲಕ ಅಭಿರುಚಿ ಮೆರೆಯುತ್ತಾಳೆ. ಇಂತಹ ಸಂಗೀತ ಸಂಸ್ಕೃತಿಯನ್ನು ಮೂಡಿಸುವಲ್ಲಿನ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ನಗರ ಪಾಲಿಕೆ ಯೋಜನಾ ಸಮಿತಿ ಅಧ್ಯಕ್ಷ ಮ.ವಿ.ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಪುರಾತತ್ವ ವಿಭಾಗದ ನಿವೃತ್ತ ನಿರ್ದೇಶಕ ಡಾ.ಕೆ.ಎಂ. ಬಾದ್ರಿ ಮುಖ್ಯ ಅತಿಥಿಯಾಗಿದ್ದರು. ಸಭಾದ ಅಧ್ಯಕ್ಷ ಭೀಮಾಶಂಕರ್ ಬಿದನೂರು ಇದ್ದರು. ನಂತರ ಬೆಂಗಳೂರಿನ ಕೌಶಿಕ್ ಐತಾಳ್ ತಂಡದವರು ಗಾಯನ ಕಚೇರಿ ನಡೆಸಿಕೊಟ್ಟರು.
ಕೃಷ್ಣರಾಜದಲ್ಲಿ ಜಿಲ್ಲಾಸ್ಪತ್ರೆಗೆ ಮನವಿ
ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಜಿಲ್ಲಾಸ್ಪತ್ರೆ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿರುವುದಾಗಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘದ ಜಿಲ್ಲಾ ಶಾಖೆಯು ಜಗನ್ಮೋಹನ ಅರಮನೆಯಲ್ಲಿ ಶನಿವಾರ ಏರ್ಪಡಿಸಿದ್ದ ಶುಶ್ರೂಷಕರ ಹಬ್ಬ ಮತ್ತು 6ನೇ ವರ್ಷದ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮೈಸೂರಿನಲ್ಲಿ ಕೆ.ಆರ್. ಆಸ್ಪತ್ರೆಯು ಬಡವರಿಗಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಸರ್ಕಾರದ ಜಿಲ್ಲಾಸ್ಪತ್ರೆ ಇಲ್ಲ. ಹೀಗಾಗಿ ಮೈಸೂರಿನಲ್ಲಿ ಜಿಲ್ಲಾಸ್ಪತ್ರೆ ಸ್ಥಾಪಿಸಬೇಕು. ಅದು ಕೆ.ಆರ್. ಕ್ಷೇತ್ರದ ವ್ಯಾಪ್ತಿಯಲ್ಲಿ ಜಿಲ್ಲಾಸ್ಪತ್ರೆ ನಿರ್ಮಿಸಬೇಕು. ಇದರಿಂದ ಮತ್ತಷ್ಟು ಬಡವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ: ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕಿ ಉಮಾ ಎಚ್. ಬಳ್ಳಾರಿ, ನಂಜನಗೂಡು ಆಸ್ಪತ್ರೆ ಶುಶ್ರೂಷಕ ಅಧೀಕ್ಷಕಿ ಇಂದಿರಮ್ಮ, ಕೆ.ಆರ್. ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕಿ ಸುನಂದಮ್ಮ, ಟಿ. ನರಸೀಪುರ ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕಿ ವಿನ್ನಿಫ್ರೆಡ್, ಕೆ.ಆರ್. ನಗರ ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕಿ ವಿ. ಸೌಭಾಗ್ಯ, ಕೆ.ಆರ್.ಆಸ್ಪತ್ರೆಯ ಸರ್ಕಾರಿ ಶುಶ್ರೂಷ ಶಾಲೆಯ ಎಲಿಜಬೆತ್ ಸರಳಕುಮಾರಿ, ಇಎಸ್‌ಐ ಆಸ್ಪತ್ರೆಯ ಎಚ್.ಸುಶೀಲಮ್ಮ, ಕೆ.ಆರ್. ಆಸ್ಪತ್ರೆಯ ಶುಶ್ರೂಷಕಿಯರಾದ ಡಿ.ಕೆ. ಲೀಲಾವತಿ, ಆರ್. ಲೀಲಾ, ಜಯನಂದ ಕುಮಾರಿ, ಚೆಲುವಾಂಬ ಆಸ್ಪತ್ರೆಯ ಸುಮಿತ್ರಾಬಾಯಿ, ಆಯುರ್ವೇದ ಆಸ್ಪತ್ರೆಯ ತನುಜಾ ಅವರಿಗೆ ಫ್ಲಾರೆನ್ಸ್ ನೈಟಿಂಗೇಲ್ ಪಶಸ್ತಿ ನೀಡಿ ಗೌರವಿಸಲಾಯಿತು.
ಅಲ್ಲದೆ, ಕೆ.ಆರ್. ಆಸ್ಪತ್ರೆ ಶುಶ್ರೂಷಕಿಯರಾದ ಟಿ.ಎಂ. ಮೀನಾಕ್ಷಿ, ಬಿ.ಪಿ. ಘನವತಿ, ಬಿ.ಎಂ. ಅನಿತಾ, ಎಸ್.ವಿ. ಪದ್ಮಲತಾ, ಮೈಸೂರು ವೈದ್ಯಕೀಯ ಕಾಲೇಜಿನ ಪಿ.ಪಿ. ಕಾಮಿನಿ, ಲಕ್ಷ್ಮೀ ದೇವಮ್ಮ ಹೆರಿಗೆ ಆಸ್ಪತ್ರೆಯ ಧನಲಕ್ಷ್ಮಿ, ಸರ್ಕಾರಿ ಶುಶ್ರೂಷ ಶಾಲೆಯ ಎ.ಬಿ. ಪುಷ್ಪಲತಾ ಹಾಗೂ ವಿದ್ಯಾರ್ಥಿನಿ ನಿಂಗರಾಜಮ್ಮ ಅವರಿಗೆ ಅತ್ಯುತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಶುಶ್ರೂಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಟಿ. ಪುಟ್ಟಸ್ವಾಮಿ, ಮೈಸೂರು ವೈದ್ಯಕೀಯ ಕಾಲೇಜು ನಿರ್ದೇಶಕ ಮತ್ತು ಡೀನ್ ಡಾ.ಬಿ. ಕೃಷ್ಣಮೂರ್ತಿ, ಆಡಳಿತಾಧಿಕಾರಿ ಡಾ.ಎಚ್.ಎಲ್. ನಾಗರಾಜ್ ಸೇರಿದಂತೆ ಇತರರು ಇದ್ದರು.