ಹನಗೋಡಿನಲ್ಲಿ ಪಿಂಚಣಿ ಅದಾಲತ್
ಹುಣಸೂರು: ಹನಗೋಡಿನ ನಾಡ ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪಿಂಚಣಿ ಮತ್ತು ಕಂದಾಯ ಅದಾಲತ್ ಕಾರ್ಯಕ್ರಮವನ್ನು ಹುಣಸೂರು ಉಪವಿಭಾಗಾಧಿಕಾರಿ ಜಗದೀಶ್ ಪಿಂಚಣಿ ಆದೇಶ ಪತ್ರವನ್ನು ಫಲಾನುಭವಿಗಳಿಗೆ ಶನಿವಾರ ವಿತರಿಸಿದರು. ನಂತರ ಮಾತನಾಡಿದ ಅವರು, ಯಾವುದೇ ವೈದ್ಯಕೀಯ ದೃಢೀಕರಣ ಪತ್ರವಿಲ್ಲದೆ ಶೇ.45ರಷ್ಟು ಅಂಗವಿಕಲತೆ ಹೊಂದಿರುವವರಿಗೆ ಹಾಗೂ ವಿಧವಾ ವೇತನ ಪಡೆಯಲು ಮಕ್ಕಳು ಸೇರಿದಂತೆ ಎಲ್ಲಾ ಸವಲತ್ತು ಹೊಂದಿರುವವರಿಗೆ ಕೊಡಬಾರದೆಂಬ ಸರ್ಕಾರದಲ್ಲಿ ಯಾವುದೇ ಆದೇಶ ಇರುವುದಿಲ್ಲ. ಇವರಿಗೆ ಪಿಂಚಣಿ ನೀಡುವಾಗ ಗ್ರಾಮ ಲೆಕ್ಕಿಗರು ನೀಡುವ ದೃಢೀಕರಣ ಪತ್ರವೇ ಅಂತಿಮವಾಗಿರುವುರಿಂದ ಅರ್ಜಿದಾರರು ನಾಡಕಚೇರಿಗೆ ಅರ್ಜಿ ಸಲ್ಲಿಸಬೇಕು. ಉಳಿದ ದಾಖಲಾತಿಗಳನ್ನು ಒದಗಿಸಿಕೊಂಡು ಪಿಂಚಣಿ ಆದೇಶ ಪತ್ರವನ್ನು ನೀಡಬೇಕು ಎಂದು ಗ್ರಾಮ ಲೆಕ್ಕಿಗರಿಗೆ ಸೂಚಿಸಿದರು.
ಬ್ಯಾಂಕಿನ ತೊಂದರೆ: ಅಸಹಾಯಕರು ಪಿಂಚಣಿ ಹಣ ಪಡೆಯಲು ಹನಗೋಡಿನ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ತೆರೆಯಲು ಬಂದರೆ ಬ್ಯಾಂಕಿನ ಅಧಿಕಾರಿಗಳು ಖಾತೆ ತೆರೆಯಲು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಬೇಜವಾಬ್ದಾರಿ ಹಾಗೂ ಹಾರಿಕೆ ಉತ್ತರ ನೀಡುತ್ತಾರೆ. ಆದ್ದರಿಂದ ಹನಗೋಡಿಗೆ ಮತ್ತೊಂದು ಬ್ಯಾಂಕ್ ಮಂಜೂರು ಮಾಡಿಸಿ ಎಂದು ಹನಗೋಡಿನ ಗ್ರಾಪಂ ಅಧ್ಯಕ್ಷೆ ಮಂಜುಳ ಮಹೇಶ್ ಮನವಿ ಮಾಡಿದರು. ಹನಗೋಡಿನ ಉಪ ತಹಸಿಲ್ದಾರ್ ನರಸಿಂಹಯ್ಯ, ಗ್ರಾಮ ಲೆಕ್ಕಿಗರಾದ ಶಿವಕುಮಾರ್, ಶ್ರೀನಿವಾಸ್, ಶಾಮಣ್ಣ, ಸೋಮಶೇಖರ್, ರೈತ ಮುಖಂಡ ಬಸವರಾಜೇಗೌಡ, ಕಲೀಲ್ ಪಾಷ ಇದ್ದರು.
ಕಾವೇರಿ ಹೋರಾಟ ಮೂಲಕವೇ ನ್ಯಾಯ
ಕೆ.ಆರ್. ನಗರ: ಕಾವೇರಿ ಸಮಸ್ಯೆ ಆರಂಭವಾದಾಗಿನಿಂದ ರಾಜ್ಯಕ್ಕೆ ನೀರಿನ ವಿಚಾರದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ನಾವು ಕಾನೂನು ಹೋರಾಟದಲ್ಲಿ ವಿಫಲರಾಗಿದ್ದೇವೆ. ಆದ್ದರಿಂದ ಮುಂದೆ ರಾಜ್ಯದ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಹೋರಾಟದ ಮೂಲಕ ನ್ಯಾಯ ಪಡೆದುಕೊಳ್ಳಬೇಕು ಎಂದು ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಹೇಳಿದರು. ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನಾ ಪ್ರಕ್ರಿಯೆ ಆರಂಭಿಸಿರುವುದನ್ನು ವಿರೋಧಿಸಲು ಜೂ. 10 ರಂದು ರಾಜ್ಯ ಸಂಸದರನ್ನೊಳಗೊಂಡ ಉನ್ನತ ಮಟ್ಟದ ಸರ್ವಪಕ್ಷ ನಿಯೋಗದೊಂದಿಗೆ ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿದ್ದು, ಅಂದು ಎಲ್ಲರೂ ಪಕ್ಷಾತೀತವಾಗಿ ರಾಜ್ಯದ ಪರ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ಸಾಲಿಗ್ರಾಮದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಕ್ಕೆ ಅವಮಾನ: ಕಾಫೀ ಶಾಪ್ನಲ್ಲಿ ಯುವತಿಯ ಫೋಟೋ ಕ್ಲಿಕ್ಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್ಆರ್ಪಿ ಎಡಿಜಿಪಿ ಡಾ.ಪಿ. ರವೀಂದ್ರನಾಥ್ ಪ್ರಕರಣವನ್ನು ಇತ್ಯರ್ಥಪಡಿಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಇದು ನಾಚಿಕೆಗೇಡಿನ ವಿಚಾರ. ಇದರಿಂದ ರಾಜ್ಯಕ್ಕೆ ಅಪಮಾನವಾಗಿದೆ ಎಂದವರು ಪ್ರತಿಕ್ರಿಯಿಸಿದರು. ಕೂಡಲೇ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಪೊಲೀಸರು ಜನರ ಸೇವಕರು ಎಂಬುದನ್ನು ಅರಿತು ಪ್ರಕರಣಕ್ಕೆ ನಾಂದಿ ಹಾಡಬೇಕು ಎಂದು ಒತ್ತಾಯಿಸಿದರು. ಶಾಸಕ ಸಾ.ರಾ. ಮಹೇಶ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಕೆ.ಎಲ್. ರಮೇಶ್ ಇದ್ದರು.
ಕೊಮ್ಮಗೆರೆ ಕೆರೆ ಅಭಿವೃದ್ಧಿ: ಶಿವರಾಜ ತಂಗಡಗಿ
ನಂಜನಗೂಡು: ತಾಲೂಕಿನ ತಗಡೂರು ಕೊಮ್ಮಗೆರೆಯನ್ನು 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ತಾಲೂಕಿನ ತಗಡೂರಿನಲ್ಲಿ ಶನಿವಾರ ಕೊಮ್ಮಗೆರೆ ಹಾಗೂ ಹಳೇಪುರ ಕೆರೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಕೆರೆಯ ಜಲಾವೃತ್ತ ಪ್ರದೇಶದಲ್ಲಿ ಮರಗಳು ಬೆಳೆದಿದ್ದು, ಇವುಗಳನ್ನು ತೆರವುಗೊಳಿಸಿ ಕೆರೆಯ ಜಲಾವೃತ್ತ ಪ್ರದೇಶವನ್ನು ಪೂರ್ಣವಾಗಿ ಶುದ್ಧಗೊಳಿಸಬೇಕು ಎಂದು ತಿಳಿಸಿದರು. ಕೆರೆ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಹಣದಲ್ಲಿ ಹೂಳು ತೆಗೆಯುವ ಕೆಲಸ, ಮರಗಳನ್ನು ತೆರವುಗೊಳಿಸುವ ಕೆಲಸ ಹಾಗೂ ಸೇತುವೆ ನಿರ್ಮಾಣ ಕೆಲಸವನ್ನು ಆದ್ಯತೆ ನೀಡಿ ಪ್ರಾರಂಭಿಸಬೇಕು. ಕೆರೆಗೆ ಹರಿದು ಬರುವ ರಾಜ ಕಾಲುವೆಯನ್ನು ಅಭಿವೃದ್ಧಿಪಡಿಸಲು ಕಾರ್ಯಕ್ರಮ ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.