ಪೊಲೀಸ್ ವಸತಿಗೃಹದುರಸ್ತಿಗೆ ಆಗ್ರಹ
ಮೈಸೂರು: ನಗರದ ಜಲಪುರಿ ಮತ್ತು ಜ್ಯೋತಿನಗರದ ಪೊಲೀಸ್ ವಸತಿಗೃಹಗಳಲ್ಲಿ ಸುಮಾರು 1,300ಕ್ಕೂ ಹೆಚ್ಚು ಮನೆಗಳಿದ್ದು, ಇವುಗಳು ಶಿಥಿಲಾವಸ್ಥೆಗೊಂಡಿವೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ತಿಳಿಸಿದ್ದಾರೆ. ಯಾವ ಸಂದರ್ಭದಲ್ಲಿಯಾದರೂ ಕುಸಿದು ಬೀಳುವ ಸಂಭವವಿದ್ದು, ಪ್ರಾಣಹಾನಿ ಉಂಟಾಗಲಿದೆ. ಇಲ್ಲಿನ ಕಾವೇರಿ, ಕಬಿನಿ ಬ್ಲಾಕ್ಗಳಲ್ಲಿನ ಕಟ್ಟಡಗಳು ಮಹಾರಾಜರ ಕಾಲದ್ದಾಗಿವೆ. ಒಳಚರಂಡಿ ಲೈನ್ಗಳು 3 ರಿಂದ 4 ಇಂಚು ಇದ್ದು, 4-5 ಮನೆಗಳಿಗೆ ಸೇರಿಸಿ ಒಂದು ಪೈಪ್ಲೈನ್ ಹಾಕಲಾಗಿರುತ್ತದೆ. ಇದರಿಂದಾಗಿ ಪ್ರತಿದಿನ ಒಳಚರಂಡಿಗೆ ಸಂಬಂಧಪಟ್ಟ ಅನೇಕ ದೂರುಗಳು ಪಾಲಿಕೆಗೆ ಬರುತ್ತಿವೆ. ಆದ್ದರಿಂದ ಪೊಲೀಸ್ ಇಲಾಖೆಯ ಮಾನವೀಯತೆ ದೃಷ್ಟಿಯಿಂದ ಕೂಡಲೇ ದುರಸ್ತಿಗೊಳಿಸುವಂತೆ ಅವರು ಕೋರಿದ್ದಾರೆ.
'ಹಣದಿಂದಲೇ ವಿದ್ಯೆ ಸಿಗುವುದಿಲ್ಲ'
ಮೈಸೂರು: ಹಣದಿಂದ ಪದವಿ ಪಡೆಯಹುದು ಆದರೆ ಪರಿಪೂರ್ಣ ವಿದ್ಯೆ ಸಿಗುವುದಿಲ್ಲ ಎಂದು ಡಿ. ಬನುಮಯ್ಯ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಪ್ರೊ. ಪಿ.ವಿ. ನರಹರಿ ಅಭಿಪ್ರಾಯಪಟ್ಟರು. ಡಿ. ಬನುಮಯ್ಯ ಪಾಲಿಟಿಕ್ನಿಕ್ ಭಾನುವಾರ ಬನುಮಯ್ಯ ಕಲಾಭವನದಲ್ಲಿ ಆಯೋಜಿಸಿದ್ದ ಡಿಪ್ಲೊಮಾ ಸಿಇಟಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಬಡವರಾಗಲಿ, ಶ್ರೀಮಂತನಾಗಲಿ ವಿದ್ಯೆ ಕೆಲವೆ ಮಂದಿಯಲ್ಲಿ ಶಾಶ್ವತವಾಗಿ ನೆಲೆಸುತ್ತದೆ. ಯಾರೇ ಆದರೂ ವಿದ್ಯೆಯನ್ನು ಪರಿಪೂರ್ಣವಾಗಿ ಅರಿಬೇಕು. ಯಾವುದೇ ಒಂದು ವಿಷಯದಲ್ಲಿ ಉನ್ನತ ಅಧ್ಯಯನ ಮಾಡಿ, ಸಂಶೋಧನೆ ನಡೆಸಿ ಅದರ ಬಗ್ಗೆ ಪರಿಪೂರ್ಣ ಜ್ಞಾನ ಸಂಪಾದಿಸಬೇಕೆ ಹೊರತು ಹಣದಿಂದ ವಿದ್ಯೆ ಕೊಂಡುಕೊಳ್ಳಲಾಗದು ಎಂದರು. ವಿದ್ಯಾರ್ಥಿ ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು. ಹಾಗೆಯೆ ಸಮಾಜ ಸೇವೆ, ದೇಶ ಸೇವೆ ಮಾಡುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು. ತಮ್ಮ ಪ್ರತಿಭೆ ಪ್ರದರ್ಶಿಸಿ ಓದಿದ ಕಾಲೇಜು ಹಾಗೂ ದೇಶಕ್ಕೆ ಉತ್ತಮ ಹೆಸರು ತಂದುಕೊಡಬೇಕು ಎಂದರು.ಮಾದರಿ ಪರಿಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 11 ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಂಸ್ಥೆ ಅಧ್ಯಕ್ಷ ಡಾ.ವಿ.ಬಿ. ಜಯದೇವ್, ಡಿ. ಬನುಮಯ್ಯ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲೆ ವಿ.ಸಿ ಕೋಮಲಾ ಇದ್ದರು.
ಜೀಬ್ರಾಕ್ಕೆ ಹೆಸರು ಸೂಚಿಸಲು ಮನವಿ
ಮೈಸೂರು: ಇಸ್ರೇಲ್ನ ಟೆಲ್ ಅವಿವ್ ಮೃಗಾಲಯದಿಂದ ತರಲಾದ ಜೀಬ್ರಾಗಳಿಗೆ ಹೆಸರು ಸೂಚಿಸುವಂತೆ ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಮನವಿ ಮಾಡಿದ್ದಾರೆ. ಮೂರು ಗಂಡು ಜೀಬ್ರಾ ಮತ್ತು ಮೂರು ಹೆಣ್ಣು ಜಿಬ್ರಾಕ್ಕೆ ಹೆಸರು ಸೂಚಿಸುವಂತೆ ಪ್ರಾಣಿ ಪ್ರಿಯರು, ವೀಕ್ಷಕರು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜೂ. 13 ರೊಳಗೆ ಮೃಗಾಲಯ ತಲುಪುವಂತೆ ಹೆಸರುಗಳ ಪಟ್ಟಿ ಕಳುಹಿಸಬಹುದು.
ದತ್ತು ಸ್ವೀಕಾರ: ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಸುಪ್ರೀತ್ ಅರಸ್ ಅವರು ಮೃಗಾಲಯದ ಬಿಳಿ ನವಿಲನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.