ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ:
ಕೆ.ಆರ್. ನಗರ: ಉದ್ಯೋಗ ಮತ್ತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವನ್ನು ಪಡೆಯಲು ಶಿಕ್ಷಣ ಅವಶ್ಯಕ. ಉತ್ತಮ ಸಮಾಜ ರೂಪಿಸುವ ದೃಷ್ಟಿಯಿಂದ ಪೋಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಮಹದೇವ್ ಹೇಳಿದರು. ತಾಲೂಕಿನ ಜವರೇಗೌಡನ ಕೊಪ್ಪಲು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದ ಅವರು, ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಇದು ಸದ್ಬಳಕೆಯಾಗಬೇಕಾದರೆ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದರು. ಮುಖ್ಯ ಶಿಕ್ಷಕಿ ಕೆ.ಪಿ. ಭಾರತಿ, ಶಿಕ್ಷಕ ಪ್ರದೀಪ್ಕುಮಾರ್, ಎಸ್ಡಿಎಂಸಿ ಸದಸ್ಯರಾದ ಪ್ರೇಮ, ಮಹದೇವಮ್ಮ, ಲಕ್ಷ್ಮಣ, ಗೋವಿಂದೇಗೌಡ ಇದ್ದರು.
ಒತ್ತುವರಿಯಾದ ಹೊಸಹೊಳಲು ಕೆರೆ
ಅಂತರಸಂತೆ: ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಗ್ರಾಮದ ಸಮೀಪ ಮೈಸೂರು ಮಾನಂದವಾಡಿ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಹೊಸಹೊಳಲು ಗ್ರಾಮದ ಕೆರೆ ಸುಮಾರು 15 ಎಕರೆಗಳಷ್ಟಿದ್ದು, ಅಕ್ಕಪಕ್ಕದವರಿಂದ ಒತ್ತುವರಿಯಾಗಿ ಕೆರೆ ಕಾಣೆಯಾಗಿದೆ. ಈ ಕೆರೆಯು ಬಹಳ ವರ್ಷಗಳಿಂದ ಹೊಸಹೊಳಲು ಹೊನ್ನಮ್ಮನಕಟ್ಟೆ, ನಿಸನ ಮುಂತಾದ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿದೆ. ಈಗ ಕೆರೆ ಹೂಳು ತುಂಬಿಕೊಂಡಿದ್ದು ಮತ್ತು ಅಕ್ಕ ಪಕ್ಕ ಒತ್ತುವರಿಯಾಗಿರುವುದರಿಂದ ಕೆರೆ ಮಾಯವಾಗಿದೆ. ಆದ ಕಾರಣ ಸಂಬಂಧಪಟ್ಟ ಇಲಾಖೆಯವರು ಈ ಕೆರೆಯನ್ನು ಸರ್ವೇ ಮಾಡಿಸಿ ಒತ್ತುವರಿದಾರರಿಂದ ತೆರವುಗೊಳಿಸಿ ಹೂಳನ್ನು ತೆಗೆಸಿ ಕೆರೆಯನ್ನು ಉಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಉದ್ಯಮಿ ಶಿವಾನಂದಪ್ಪ ನಿಧನ
ರಾವಂದೂರು: ರಾವಂದೂರಿನ ಪ್ರಮುಖ ವಾಣಿಜ್ಯೋದ್ಯಮಿ ಆರ್.ಸಿ. ಶಿವಾನಂದಪ್ಪ (88) ಭಾನುವಾರ ನಿಧನರಾದರು.ಇವರಿಗೆ ತಲಾ ಮೂವರು ಪುತ್ರರು ಹಾಗೂ ಪುತ್ರಿಯರು ಇದ್ದಾರೆ. ಕಳೆದ 50 ವರ್ಷಗಳಿಂದ ವ್ಯಾಪಾರ ವಹಿವಾಟುಗಳಿಂದ ಚಿರಪರಿಚಿತರಾಗಿದ್ದರು. ಇವರ ನಿಧನಕ್ಕೆ ರಾವಂದೂರಿನ ವರ್ತಕರ ಸಂಘದ ಅಧ್ಯಕ್ಷ ಆರ್.ವಿ. ಬಸವರಾಜ್, ಆರ್. ಮೋಹನ್, ಆರ್.ಎಸ್. ಕುಮಾರವಿಜಯ್, ಆರ್.ಎಸ್. ಮಹೇಶ್, ಆರ್.ಎಸ್. ಸುರೇಶ್ ಸಂತಾಪ ಸೂಚಿಸಿದ್ದಾರೆ. ಶಾಸಕ ಕೆ. ವೆಂಕಟೇಶ್, ಮಾಜಿ ಶಾಸಕ ಎಚ್.ಸಿ. ಬಸವರಾಜ್ ಭೇಟಿ ನೀಡಿ ಸಾಂತ್ವನ ಹೇಳಿದರು.
'ಹೋರಾಟ ಮಾಡದೇ ರೈತ ನಾಯಕರಾಗಲು ಸಾಧ್ಯವಿಲ್ಲ'
ನರಸೀಪುರ: ರೈತಪರ ಹೋರಾಟಗಳನ್ನು ಮಾಡದೆ ಟೀಕೆಗಳಿಂದಲೇ ರೈತ ನಾಯಕರಾಗಲು ರೈತ ಸಂಘದ ಕಾರ್ಯಾಧ್ಯಕ್ಷ ಮಂಗಳೂರಿನ ವರ್ಮಾ ಹೊರಟಿದ್ದಾರೆ ಎಂದು ಕಬಿನಿ ರೈತ ಹಿತರಕ್ಷಣಾ ಸಮಿತಿ ಆರೋಪಿಸಿದೆ. ಕಳೆದ ಮೂರೂವರೆ ದಶಕಗಳಿಂದಲೂ ರೈತಪರ ಹೋರಾಟಗಳನ್ನು ಮಾಡಿಕೊಂಡು ರೈತ ನಾಯಕ ಎನಿಸಿಕೊಂಡಿರುವ ಕುರುಬೂರು ಶಾಂತಕುಮಾರ್ ಬಗ್ಗೆ ಹಗುರವಾಗಿ ಮಾತನಾಡಿ, ವರ್ಮಾ ಅವರು ಮತ್ತೊಬ್ಬರನ್ನು ಟೀಕಿಸುವುದರಿಂದಲೇ ಮುಖಂಡರೆನಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹನ್ನೇರಡು ವರ್ಷಗಳ ನಂತರ ಹುತಾತ್ಮ ರೈತ ಗುರುಸ್ವಾಮಿನ ಕುಟುಂಬಕ್ಕೆ ಸರ್ಕಾರ ನೀಡಿರುವ ಪರಿಹಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಅಧ್ಯಕ್ಷ ಟಿ.ಸಿ. ಮಹದೇವಪ್ಪ ಹಾಗೂ ಕಾರ್ಯದರ್ಶಿ ಕಿರಗಸೂರು ಶಂಕರ್ ಖಂಡಿಸಿದ್ದಾರೆ.