ರಸ್ತೆಗಳ ಅಧ್ವಾನ ಕೇಳೋರಿಲ್ಲ...
ನಗರದ ಶೇ.99 ರಸ್ತೆಗಳಲ್ಲಿ ಕಣ್ಣಿಗೆ ಎದ್ದು ಕಾಣಿಸುವುದೇನೆಂದರೆ, ರಸ್ತೆಯ ಮಧ್ಯದಲ್ಲಿ ಉಬ್ಬಿದ ಮೇಲ್ಮೈ ಇಲ್ಲ ಮತ್ತು ರಸ್ತೆಯು ಪಕ್ಕದ ಭುಜಕ್ಕಿಂತ ಕೆಳಗಿನ ಮಟ್ಟದಲ್ಲಿದೆ. ಇದರಿಂದಾಗಿ ರಸ್ತೆಯ ಮೇಲೆ ಬಿದ್ದ ಮಳೆನೀರು ಮಾತ್ರವಲ್ಲ, ರಸ್ತೆ ಭುಜದ ಮೇಲೆ ಬಿದ್ದ ನೀರೂ ಸಹ ರಸ್ತೆಯ ಮೇಲೆಯೇ ಹರಿಯುವಂತಾಗಿದೆ. ನೀರು ಡಾಂಬರಿನ ವೈರಿ. ಆದ್ದರಿಂದ ಅದನ್ನು ರಸ್ತೆಯಿಂದ ದೂರ ಇಡಬೇಕೆಂಬ ರಸ್ತೆ ತಂತ್ರಜ್ಞಾನದ ಮೂಲತತ್ವಕ್ಕೆ ಇದು ವಿರುದ್ಧವಾಗಿದೆ. ರಸ್ತೆಯ ಮಧ್ಯಕ್ಕೆ ಉಬ್ಬಿದ ಮೇಲ್ಮೈ ಕೊಟ್ಟು ರಸ್ತೆ ಭುಜವನ್ನು ಕೆಳಗಿಳಿಸುವುದರಿಂದ ಸಿಗುವ ಹೆಚ್ಚುವರಿ ಬಾಳಿಕೆಯ, ಆಗುವ ಹೆಚ್ಚುವರಿ ಖರ್ಚಿಗಿಂತ ಮಿಗಿಲು. ಆದದ್ರಿಂದ ರಸ್ತೆಗೆ ಉಬ್ಬನ್ನು ಕೊಡುವುದು ಮತ್ತು ರಸ್ತೆ ಭುಜವನ್ನು ಕೆಳಗಿಳಿಸುವುದು, ಇವೆರಡನ್ನು ಮೈಸೂರು ನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಗಳು ಕೆಲಸದ ತಪಶೀಲಿನಲ್ಲಿ ಸೇರಿಸಬೇಕು. ಇದಕ್ಕೆ ಜತೆಗೆಯಾಗಿ, ನಗರಪಾಲಿಕೆಯು ರಸ್ತೆಯ ಪಕ್ಕದ ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಮಾಡುತ್ತಿಲ್ಲ. ಇದರಿಂದ ರಸ್ತೆಯ ಮೇಲೆ ಮಳೆನೀರು ಹರಿಯುವ ಸಮಸ್ಯೆ ಇನ್ನೂ ಉಲ್ಬಣವಾಗುತ್ತಿದೆ.
ಟಿ ಸಿ.ವಿ. ಶ್ರೀರೂಪಾ, ಮೈಸೂರು ಗ್ರಾಹಕರ ಪರಿಷತ್
ಇನ್ನೆಷ್ಟು ಜನರ ಬಲಿಯಾಗಬೇಕು..
ನಗರದ ಮೇಟಗಳ್ಳಿಯ ರಾಯಲ್ಇನ್ ಹೋಟೆಲ್ನಿಂದ ಸಿಪೆಟ್ವರೆಗೆ ವರ್ತುಲ ರಸ್ತೆಗೆ ಈವರೆಗೆ ಡಾಂಬರು ಹಾಕದೇ ಎಂಡಿಎ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದು, ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ರಸ್ತೆಯು ಹೆಬ್ಬಾಳ್ ಕೈಗಾರಿಕೆ ಪ್ರದೇಶಕ್ಕೆ ತೆರಳುವ ಮುಖ್ಯ ದಾರಿಯಾಗಿದ್ದು, ದಿನನಿತ್ಯ ಸುಮಾರು 50 ಸಾವಿರಕ್ಕೂ ಹೆಚ್ಚು ಭಾರಿ ವಾಹನಗಳು ಸಂಚರಿಸುತ್ತದೆ. ಈ ವರ್ತುಲ ರಸ್ತೆಯ ಕಾಮಗಾರಿ ಪ್ರಾರಂಭಗೊಂಡು 5 ವರ್ಷವಾದರೂ ಈವರೆಗೂ ಕಾಮಗಾರಿ ಮುಗಿದಿಲ್ಲ. ಈ ರಸ್ತೆಯಲ್ಲಿ ದಿನನಿತ್ಯ ಅಪಘಾತ ಸಂಭವಿಸುತ್ತಲೇ ಇದೆ. ಪ್ರಾಣ ಕಳೆದುಕೊಂಡವರು ಲೆಕ್ಕವೇ ಇಲ್ಲ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಜೀವಭಯ ಉಂಟಾಗಿದೆ. ಈಗಾಗಲೇ ಎಲ್ಲಾ ಚುನಾವಣೆಗಳು ಮುಗಿದಿದ್ದು ಜನಪ್ರತಿನಿಧಿಗಳು ನೀಡಿದ ಭರವಸೆ ಮಾತ್ರ ಈಡೇರಿಲ್ಲ. ಎಂಡಿಎ ಅಧಿಕಾರಿಗಳು ಕೂಡಲೆ ಕಾಮಗಾರಿ ಪ್ರಾರಂಭಿಸಿ, ವಾಹನ ಸವಾರರು ನಿರ್ಭಯವಾಗಿ ಸಂಚರಿಸುವಂತೆ ಅವಕಾಶ ಮಾಡಿಕೊಡುವಂತೆ ಮನವಿ.
ಟಿ ಸುರೇಶ್ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ.
ಹದಗೆಟ್ಟ ಭುವನೇಶ್ವರಿ ಉದ್ಯಾನವನ
ಮೈಸೂರಿನ 12ನೇ ವಾರ್ಡ್ಗೆ ಸಂಬಂಧಿಸಿದಂತೆ ಆರ್ಎಂಪಿ ರಸ್ತೆಯಲ್ಲಿರುವ ಭುವನೇಶ್ವರಿ ಉದ್ಯಾನವನದ ಕಥೆ ಹೇಳತೀರದು. ಕೆನರಾ ಬ್ಯಾಂಕ್ ಎದುರು, ಮೋರಿ ಪಕ್ಕದಲ್ಲಿ ಸಣ್ಣದಾದ ಉದ್ಯಾನವನ ನಿರ್ಮಿಸಿ ಅಕ್ಕ ಪಕ್ಕದ ಜನತೆಗೆ ತುಂಬಾ ಸಂತೋಷದಿಂದ ಇದ್ದು ಪರಿಸರಕ್ಕೂ ಧಕ್ಕೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದರು. ಮತ್ತೆ ಕೆಲವು ಪಡ್ಡೆ ಹುಡುಗರು ಪಾರ್ಕಿನ ಮಧ್ಯೆ ಕನ್ನಡಾಂಬೆಯ ಧ್ವಜವನ್ನು ನೆಟ್ಟಿದ್ದರು. ಆದರೆ, ಈಗ ಧ್ವಜವೂ ಇಲ್ಲ. ಸುತ್ತ ಪಾರ್ಥೇನಿಯಂ, ಗರಿಕೆ, ಗ್ರಿಲ್ಗಳಿಗೆ ಹಬ್ಬಿರುವ ಅಂಬುಗಳು, ಸಾಲದಕ್ಕೆ ಪಾರ್ಕಿನ ಮುಂದೆಯೇ ಮೀನು ಮಾರಾಟ ಕೇಂದ್ರ. ಕೇಂದ್ರದಿಂದ ಹೊರಡುವ ಕೆಟ್ಟ ವಾಸನೆ. ಹಾಗೆಯೇ ಶಾಂತಿಸಾಗರದಿಂದ ಇಸ್ಕಾನ್ ದೇವಸ್ಥಾನದವರೆವಿಗೂ ಅಲ್ಲಿಂದ ಹರಿದು ಬರುವ ಮರಳು. ಅಲ್ಲಲ್ಲೇ ಹಳ್ಳಕೊಳ್ಳಗಳು. ಆರ್ಎಂಪಿ ರಸ್ತೆಯುದ್ದಕ್ಕೂ ಮಳೆಯಲ್ಲಿ ಕೊಚ್ಚಿಕೊಂಡು ಬರುವ ಮರಳು, ಎಷ್ಟೋ ಮಂದಿ ಸ್ಕೂಟರ್, ಸೈಕಲ್ಗಳಲ್ಲಿ ಬಿದ್ದಿರುವುದುಂಟು. ಇದೆಲ್ಲಾ ಈಗಿರುವ ನಗರಸಭೆ ಸದಸ್ಯರಿಗೆ ಗೊತ್ತಿಲ್ಲವೋ ಇಲ್ಲವೋ ಆದ್ದರಿಂದ ಇದರ ಬಗ್ಗೆ ಈಗಲಾದರು ನಗರಪಾಲಿಕೆಯಾಗಲಿ, ಸದಸ್ಯರಾಗಲಿ ಉದ್ಯಾನವನವನ್ನು ಸರಿದೂಗಿಸಲಿ ಎಂದು ನಂಬೋಣವೆ
ಟಿ ಸಿ. ಶಿವಣ್ಣ, ಅಶೋಕಪುರಂ
ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು
ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ ನಗರದ ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ಆರ್ಟಿಐ ಅನ್ನು ಜಾರಿಗೆ ತಂದಿರುವುದಿಲ್ಲ. ನೆಪ ಮಾತ್ರಕ್ಕೆ 1 ಅಥವಾ 2 ಪ್ರವೇಶಾತಿಗಳನ್ನು ನೀಡಿದ್ದಾರೆ. ಮತ್ತೆ ಅದೇ ಪ್ರಕಾರ ಹಗಲು ದರೋಡೆ ಮಾಡುತ್ತಿದ್ದಾರೆ. ಆದ್ದರಿಂದ ಬಡ ಮಕ್ಕಳು ವಿದ್ಯಾಭ್ಯಾಸ ಮಾಡಲು ತೊಂದರೆ ನೀಡುತ್ತಿದ್ದಾರೆ. ದಯಮಾಡಿ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸದರಿ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೋರುತ್ತೇವೆ.
ಟಿ ಪದಾಧಿಕಾರಿಗಳು, ಶ್ರೀ ತಿಲಕ್ ಯುವಕರ ಕ್ಷೇಮಾಭಿವೃದ್ಧಿ ಸಂಘ
ರೇಲ್ವೆ ಇಲಾಖೆಯಿಂದ ಮಾಹಿತಿ ಕೊರತೆ
ರೈಲ್ವೆ ಪ್ರಯಾಣದಲ್ಲಿ ಮಲಗಲು ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಹಾಗೂ ಆಯಾಸವೆನಿಸದ ಪ್ರಯಾಣ ನಮಗೆ ಲಭ್ಯವಿದೆ. ಆದರೆ ರಾತ್ರಿಯ ವೇಳೆ ನಿಲ್ದಾಣಗಳು ಬಂದಾಗ, ಯಾವ ಊರು ಬಂದಿದೆಯೆಂದು ತೋಚುವುದಿಲ್ಲ. ಪ್ರಯಾಣಿಕರು ಗಲಿಬಿಲಿಗೊಳ್ಳುತ್ತಾರೆ. ಆದ್ದರಿಂದ ಯಾವುದೇ ಪ್ರಕಾರದ ರೈಲುಗಾಡಿಯಲ್ಲಾಗಲಿ ನಿಲ್ದಾಣಗಳು ಬಂದಾಗ ಹೆಸರಿಸುವಂತೆ ರೈಲ್ವೆ ಸಚಿವರು ಕ್ರಮ ಕೈಗೊಳ್ಳಬೇಕು. ಹಾಗೆ ನಿಲ್ದಾಣಗಳು ಬಂದಾಗ ಕನಿಷ್ಠ ಪಕ್ಷ 10 ನಿಮಿಷ ರೈಲು ಗಾಡಿಯನ್ನು ನಿಲ್ಲಿಸಬೇಕು. ಇದರಿಂದ ಹತ್ತುವವರಿಗೆ, ಇಳಿಯುವವರಿಗೆ ಸುಲಭವಾಗುತ್ತದೆ. ಮತ್ತು ತರಾತುರಿಯಲ್ಲಿ ಹತ್ತಲು ಹೋಗಿ ರೈಲಿನಿಂದ ಕೆಳಗೆ ಬಿದ್ದೋ, ಲಗೇಜನ್ನು ತೆಗೆಯಲಾಗದೆ ಒಂದು ಕಠಿಣ ವಾತಾವರಣ ನಿರ್ಮಾಣವಾಗುತ್ತದೆ. ಈ ಎರಡು ಅಂಶಗಳನ್ನು ರೈಲ್ವೆ ಇಲಾಖೆ ಪರಿಹರಿಸಬೇಕಾಗಿದೆ.
ಟಿ ಕೆ.ಎಸ್. ಪ್ರದೀಪ್ಕುಮಾರ್, ಬೋಗಾದಿ ಗ್ರಾಮ
ಸರ್ಕಾರದ ಸವಲತ್ತುಗಳು ದುರುಪಯೋಗ
ಮೈಸೂರಿನ ಬಿಬಿ ಕೇರಿ ಕೊಳಚೆ ನಿವಾಸಿಗಳಿಗೆಂದು ಹಂಚ್ಯಾ ಸಾತಗಳ್ಳಿ ಬಡಾವಣೆಯಲ್ಲಿ ಬಾಂಬೆ ಯೋಜನೆಯಡಿಯಲ್ಲಿ 125 ಮನೆಗಳನ್ನು ಕೊಳಚೆ ಮಂಡಳಿಯ ಮೂಲಕ ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಈ ಮನೆಗಳ ಪೈಕಿ 85ನೇ ನಂಬರಿನ ಮನೆಯನ್ನು ಬಿಬಿ ಕೇರಿ ಕೊಳಚೆ ಪ್ರದೇಶದಲ್ಲಿಯೇ ವಾಸವಾಗಿದ್ದ ಸುಬ್ಬಲಕ್ಷ್ಮಮ್ಮ ಕೋಂ ಪಳನಿಸ್ವಾಮಿ ಎಂಬವರಿಗೆ ನೀಡಲಾಗಿತ್ತು. ಇವರು ಮನೆಗಳ ಹಂಚಿಕೆ ದಿನದಿಂದಲೂ ವಾಸವಾಗಿದ್ದಾರೆ. ಈಗ ಬಿಬಿ ಕೇರಿಯ ಕೆಲವು ಮುಖಂಡರು ಮಂಡಳಿಯವರ ಸಹಕಾರರದಿಂದ ಬಿಬಿ ಕೇರಿಯ ಕೊಳಚೆ ನಿವಾಸಿಗಳ ಸ್ವಂತ ಮನೆಗಳನ್ನು ಹೊಂದಿದ್ದು, ಗಂಡ- ಹೆಂಡತಿ ಇಬ್ಬರು ಕೆಲಸದಲ್ಲಿ ಇರುವ ಬ್ಯಾಂಕ್ ರಂಗಣ್ಣ ಎಂಬವವರ ಹೆಸರಿಗೆ ಸುಬ್ಬಲಕ್ಷ್ಮಮ್ಮ ವಾಸವಾಗಿರುವ 85ನೇ ಮನೆಯ ದಾಖಲಾತಿಗಳನ್ನು ಮಾಡಿಸಿ ಸುಬ್ಬಲಕ್ಷ್ಮಮ್ಮ ಅವರನ್ನು ಬೇರೆ ಮನೆಗೆ ವಗಾರ್ವಣೆ ಮಾಡುವ ಉದ್ದೇಶದಿಂದ ಸುಬ್ಬಲಕ್ಷ್ಮಮ್ಮನಿಗೆ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಮೋಸವಾಗುತ್ತಿದ್ದು, ಮೈಸೂರಿನವರೆ ಆದ ಮುಖ್ಯಮಂತ್ರಿಗಳ ಆ ಬಗ್ಗೆ ಗಮನ ಹರಿಸಿ ನ್ಯಾಯ ದೊರಕಿಸಿಕೊಡಬೇಕು.
ಟಿ ಎಂ. ಸುಬ್ರಹ್ಮಣ್ಯ, ಅಧ್ಯಕ್ಷರು, ಕೆಎಸ್ಡಿಬಿ ಜೆಎನ್ ನರ್ಮ್ ಮನೆಗಳ ನಿರ್ವಹಣ ಸಂಘ
ಹೆಸರಿಗೆ ಸರ್ಕಾರಿ ಪಶು ಆಸ್ಪತ್ರೆ
ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಸರ್ಕಾರಿ ಪಶು ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಿ, ಹೆಸರಿಗೆ ಸರ್ಕಾರಿ ಆಸ್ಪತ್ರೆ. ಆದರೆ, ಅಲ್ಲಿ ಖಾಸಗಿ ಆಸ್ಪತ್ರೆಯಂತೆ ವರ್ತಿಸುತ್ತಾರೆ. ಈ ಆಸ್ಪತ್ರೆಯಲ್ಲಿ ಬಹಳ ವರ್ಷಗಳ ಹಳೆಯದಾದ ಪಾಳುಬಿದ್ದ ಮೂರು ಕಟ್ಟಡಗಳಿವೆ. ಸುತ್ತಾ ಪಾರ್ಥೇನಿಯಂ ಗಿಡಗಳು ಬೆಳೆದು ನಿಂತಿವೆ. ಪಕ್ಕದಲ್ಲೇ ದೊಡ್ಡ ಚರಂಡಿ ಇದೆ. ಅಕ್ಕ ಪಕ್ಕದಲ್ಲಿ ಕಸದ ರಾಶಿ ಹಾಗೂ ತುಕ್ಕು ಹಿಡಿದಿ ಕರ್ನಾಟಕ ಕುರಿತ ಮತ್ತು ಉತ್ಪನ್ನಗಳ ಮಂಡಳಿ ನಾಮಫಲಕ ನೇತಾಡುತ್ತಿದೆ. ಆಸ್ಪತ್ರೆಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಒಂದು ನಾಯಿ ಕರೆದುಕೊಂಡು ಚುಚ್ಚು ಮುದ್ದು ಹಾಕಿಸಿದರರೆ 900 ರು. ವರ್ಷ ಬಿಟ್ಟು 500 ರು. ವಸೂಲಿ ಮಾಡುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಲ್ಲವೆ ಎಂದು ಪ್ರಶ್ನಿಸಿದರೆ ಸ್ಟಾಕ್ ಇಲ್ಲ ಎನ್ನುತ್ತಾರೆ. ಹಣ ಕೊಟ್ಟರೆ ಅಲ್ಲೇ ಚುಚ್ಚುಮದ್ದು ನೀಡುತ್ತಾರೆ ಹಾಗೆಯೇ ಮೀನುಗಾರಿಕೆ ಕಚೇರಿ ಮುಂದೆ ದೊಡ್ಡ ಗಾತ್ರದ ಮರಗಳನ್ನು ಮಳೆ ನೆಪ ಹೇಳಿ ಕಡಿಯುತ್ತಿದ್ದಾರೆ. ಇದರಿಂದ ಪರಿಸರ ಹಾಳಾಗುತ್ತಿದೆ.
ಟಿ ಸಿ. ಶಿವಣ್ಣ, ಅಶೋಕಪುರಂ
ಕಿಲ್ಲರ್ ಕೆಎಸ್ಆರ್ಟಿಸಿ
ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ ಕೆಎಸ್ಆರ್ಟಿಸಿಯ ಜೋಡಿ ಬಸ್ಸುಗಳು ಸೇರಿ ದ್ವಿಚಕ್ರ ವಾಹನ ಸವಾರಳ ಬಲಿ ಪಡೆದಿವೆ. ಕೆಎಸ್ಆರ್ಟಿಸಿ ಬಸ್ಸುಗಳು ಸಂಚರಿಸುವ ಬಹುತೇಕ ರಸ್ತೆಗಳು ಜೋಡಿ ರಸ್ತೆಗಳೇ. ಈ ರಸ್ತೆಗಳ ನಡುವೆ ವಿಭಜಕಗಳಿರುತ್ತವೆ. ಹೀಗಿದ್ದರೂ ಸಹ ಈ ಕಿಲ್ಲರ್ ಕೆಎಸ್ಆರ್ಟಿಸಿ ಬಸ್ಸುಗಳು ಈ ಜೋಡಿ ರಸ್ತೆಗಳಲ್ಲೂ ಕೂಡ ಜೋಡಿಯಾಗಿ ಸಂಚರಿಸುತ್ತವೆ. ಒಂದನ್ನೊಂದು ಹಿಂದಕ್ಕಿಕ್ಕುವ ಪ್ರಯತ್ನದಲ್ಲಿ ದ್ವಿಚಕ್ರ ವಾಹ ಸವಾರರಿಗೆ ಪ್ರಾಣಭಯ ಉಂಟುಮಾಡುತ್ತವೆ. ರಾಮಸ್ವಾಮಿ ವೃತ್ತದಲ್ಲಂತೂ ಈ ಬಸ್ಸುಗಳು ವೃತ್ತವನ್ನು ಬಳಸದೇ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತವೆ. ಸಂಚಾರ ನಿಯಂತ್ರಣ ಮಾಡಬೇಕಾದ ಪೊಲೀಸರು ನಾಪತ್ತೆಯಾಗಿದ್ದು ಅವರ ಜಾಗದಲ್ಲಿ ಗೃಹ ರಕ್ಷಕ ದಳದವರು ಕುಳಿತು ಮೊಬೈಲ್ ಫೋನಿನಲ್ಲಿ ಆಟವಾಡುತ್ತಿರುತ್ತಾರೆ. ಇವರ ಸೂಚನೆಗಳಿಗೆ ಬಸ್ ಚಾಲಕರಾಗಲೀ ಆಟೋಚಾಲಕರಾಗಲೀ ಕಿಂಚಿತ್ತೂ ಗೌರವ ನೀಡುವುದಿಲ್ಲ. ಕಾರಣ ಇವರೆಲ್ಲರದ್ದೂ ಖಾಕಿ ಸಮವಸ್ತ್ರ ಅಲ್ಲದೆ ಮೈಸೂರಿನ ಬಹುತೇಕ ಸಿಟಿ ಬಸ್ ಚಾಲಕರು ಮೊಬೈಲ್ ಫೋನ್ ಬಳಸುತ್ತಾ ಒಂದೇ ಕೈಯಲ್ಲಿ ಬಸ್ ಚಲಾಯಿಸುತ್ತಿರುತ್ತಾರೆ. ಈ ಕೂಡಲೇ ಮೈಸೂರು ಪೊಲೀಸ್ ಆಯುಕ್ತರು ಕೆಎಸ್ಆರ್ಟಿಸಿ ಬಸ್ ಚಾಲಕರಿಗೆ ಬಿಸಿ ಮುಟ್ಟಿಸಿ ಬಸ್ಸುಗಳು ಒಂದನ್ನೊಂದು ಓವರ್ ಟೇಕ್ ಮಾಡದಂತೆ ಕ್ರಮ ಕೈಗೊಂಡು ಜನರ ಪ್ರಾಣ ಕಾಪಾಡಲಿ. ಎಲ್ಲ ವೃತ್ತಗಳಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿ ಈ ಬಸ್ ಚಾಲಕರ ವಿರುದ್ಧ. ಕ್ರಮ ಕೈಗೊಳ್ಳಲಿ.
ಟಿ ಪಿ.ಜೆ. ರಾಘವೇಂದ್ರ, ನ್ಯಾಯವಾದಿ
ಯಾದವಗಿರಿ ಕಾಲುದಾರಿ ನಾಶ
ಯಾದವಗಿರಿ- ಬಂಬೂ ಬಜಾರ್ ರಸ್ತೆಯು (ಬ್ರಹ್ಮರ್ಷಿ ನಾರಾಯಣ ಗುರು ರಸ್ತೆ) ಇಕ್ಕಟ್ಟಾಗಿದ್ದರೂ ನಗರದ ಒಳ ವರ್ತುಲ ರಸ್ತೆಯ ಒಂದು ಭಾಗವಾಗಿದೆ. ರಸ್ತೆಯಲ್ಲಿ ವಾಹನದಟ್ಟಣೆ ಸಾಕಷ್ಟಿದೆ. ಭಾರಿ ವಾಹನಗಳನ್ನು ಪ್ರತಿಬಂಧಿಸಲಾಗಿದೆ ಎಂಬ ಫಲಕಗಳು ಇದ್ದರೂ ಅದನ್ನು ಪಾಲಿಸುತ್ತಿಲ್ಲ. ಮೇಲಾಗಿ, ರಸ್ತೆಯು ಬಹಳ ಇಳಿಜಾರಾಗಿದೆ. ಈ ರಸ್ತೆಯಲ್ಲಿ ಇನ್ನೂ ಹೆಚ್ಚು ಅಪಘಾತಗಳು ಸಂಭವಿಸದೇ ಇರುವುದು ನಮ್ಮ ಅದೃಷ್ಟ. ಸುನಂದ ಶಾಲೆಯ ಮುಂದೆ ರಸ್ತೆಯ ಒಂದು ಬದಿಯಲ್ಲಿ ಕಿಂಚಿತ್ ದೂರವನ್ನು ಬಿಟ್ಟರೆ ಈ ರಸ್ತೆಯಲ್ಲಿ ಕಾಲುದಾರಿಯೇ ಇಲ್ಲ. ಈ ಎಲ್ಲ ಕಾರಣಗಳಿಂದ, ಈ ರಸ್ತೆಯಲ್ಲಿ ಪಾದಚಾರಿಗಳು ಅನುಭವಿಸುವ ತೊಂದರೆಯನ್ನು ವಿವರಿಸಲು ಅಸಾಧ್ಯ. ಅದರಲ್ಲೂ, ಈ ರಸ್ತೆಯನ್ನು ಬಳಸುವ 4-5 ಶಾಲೆಗಳ ಮಕ್ಕಳು ಮತ್ತು 3 ವಿದ್ಯಾರ್ಥಿನಿಲಯಗಳ (ಅವುಗಳಲ್ಲಿ ಒಂದು ಅಂಧ ವಿದ್ಯಾರ್ಥಿಗಳ ನಿಲಯ) ವಿದ್ಯಾರ್ಥಿಗಳು. ಈಗ ಉಪಯುಕ್ತವಾಗಿದ್ದ ಒಂದೇ ಒಂದು ಕಾಲುದಾರಿಯ ಮೇಲೆ ಯಾರೋ ಕಲ್ಲು ಮಣ್ಣು ಸುರಿದು ಹಾಳು ಮಾಡಿದ್ದಾರೆ. ಸುರಿದ ಮಣ್ಣನ್ನು ಸಮತಟ್ಟಾಗಿ ಮಾಡುವ ಪ್ರಯತ್ನ ಮಾಡಿರುವುದನ್ನು ನೋಡಿದರೆ ನಗರಪಾಲಿಕೆಯೇ ಈ ಕೆಲಸವನ್ನು ಮಾಡಿರುವ ಸಂಭವವಿದೆ. ಯಾರೇ ಆಗಲಿ, ಕಲ್ಲುಮಣ್ಣು ಸುರಿದು ರಸ್ತೆಯಲ್ಲಿ ಕಾಲುದಾರಿಯೇ ಇಲ್ಲದ ಹಾಗೆ ಮಾಡಿರುವವರು ಸ್ಯಾಡಿಸ್ಟಿಕ್ ಜನರೇ ಇರಬೇಕು. ಈಗ ಮಕ್ಕಳಿಗೆ ಮತ್ತು ಅಂಧ ವಿದ್ಯಾರ್ಥಿಗಳಿಗೆ ದೇವರೇ ಗತಿ.
ಟಿ ದ್ವಾರಕನಾಥ್ ನಾರಾಯಣ್, ಮೈಸೂರು ಗ್ರಾಹಕರ ಪರಿಷತ್
ಮೈಸೂರಿನಿಂದ ಅಮೃತಸರಕ್ಕೆ ರೇಲ್ವೆ ಸಂಪರ್ಕ ಕಲ್ಪಿಸಲು ಮನವಿ
ಸಾಂಸ್ಕೃತಿಕ ನಗರಿ ಮೈಸೂರಿನಿಂದ ಅಮೃತಸರ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ನೇರ ರೈಲು ಸಂಪರ್ಕ ಕಲ್ಪಿಸಿದರೆ ಈ ಭಾಗದ ಅಂದರೆ ಮೈಸೂರು, ಕೊಡಗು, ಧಾರವಾಡ, ಹುಬ್ಬಳ್ಳಿ, ಬೆಳಗಾವಿಯಲ್ಲಿರುವ ಯೋಧರು ಪ್ರಯಾಣಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಈಗಾಗಲೇ ಇವರು ಇಲ್ಲಿಂದ ಅಷ್ಟು ದೂರ ಕ್ರಮಿಸುವಾಗ ಹೆಚ್ಚು ಪ್ರಮಾಣದ ಲಗ್ಗೇಜನ್ನು ಹೆಗಲ ಮೇಲಿಟ್ಟುಕೊಂಡು ಸಂಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಇವರ ಸಮಸ್ಯೆ ನೀಗಿಸಲು ರೈಲು ಸಂಪರ್ಕದ ಅವಶ್ಯಕತೆ ಇದೆ. ಮತ್ತೊಂದು ದೃಷ್ಟಿಯಲ್ಲಿ ಮೈಸೂರು, ಕೊಡಗು ಸಾಂಪ್ರದಾಯಿಕ ನಗರಗಳಾಗಿವೆ. ಹಾಗೆ ಜಲಿಯನವಾಲಾಬಾಗ್, ಗೋಲ್ಡೆನ್ ಟೆಂಪಲ್, ವಾಘಾ ಬಾರ್ಡರ್ ಮತ್ತು ಜಮ್ಮು ತವಿ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶಗಳಾಗಿವೆ. ಪ್ರವಾಸಿಗರು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಹೋಗಿ ಬರಲು ಸಾಧ್ಯವಾಗುತ್ತದೆ. ಇನ್ನು ಜಮ್ಮು ತವಿ. ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕ್ರೀಡೆಗಳು ನಡೆದಾಗ ಕ್ರೀಡಾಪಟುಗಳು ಭಾಗವಹಿಸಲು ಅನುಕೂಲವಾಗುತ್ತದೆ.
ಟಿ ಡಾ. ಪುಲಿಕೇಶಿ ವೈ. ಶೆಟ್ಟಪ್ಪನವರ್, ಪ್ರಧಾನ ಕಾರ್ಯದರ್ಶಿ, ನ್ಯಾಷನಲ್ ಸ್ಪೋರ್ಟ್ಸ್ ಡೇ ಸೆಲೆಬ್ರೇಷನ್ ಕಮಿಟಿ