ಹಳಿಯೂರಿನಲ್ಲಿ ದೊಡ್ಡಮ್ಮತಾಯಿ ರಥೋತ್ಸವ
ಕೆ.ಆರ್. ನಗರ: ತಾಲೂಕಿನ ಹಳಿಯೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗ್ರಾಮ ದೇವತೆ ದೊಡ್ಡಮ್ಮ ತಾಯಿ ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ರಾತ್ರಿ 10.30ರಲ್ಲಿ ಶಾಸಕ ಸಾ.ರಾ. ಮಹೇಶ್ ಮತ್ತು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಇದೇ ವೇಳೆ ಹಾಜರಿದ್ದ ಹಳಿಯೂರು, ಸಾಲೆಕೊಪ್ಪಲು, ಜವರೇಗೌಡನಕೊಪ್ಪಲು, ಹಳಿಯೂರು ಬಡಾವಣೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಮಂದಿ ಭಕ್ತರು ರಥಕ್ಕೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ರಥವು ಹಳಿಯೂರು ಗ್ರಾಮದಿಂದ ಹಳಿಯೂರು ಬಡಾವಣೆಯಲ್ಲಿರುವ ದೇವಾಲಯದವರೆಗೆ ಬಂದು ಅಲ್ಲಿ ವಿಶೇಷ ಪೂಜೆ ಮತ್ತು ಕೊಂಡ ಹಾಯುವಿಕೆಯ ನಂತರ ಬೆಳಗಿನ ಜಾವ 5 ಗಂಟೆಗೆ ಸ್ವಸ್ಥಾನ ಸೇರಿತು. ಹಳಿಯೂರು ಗ್ರಾಪಂ ಅಧ್ಯಕ್ಷ ರಾಜೇಗೌಡ, ತಾಪಂ ಸದಸ್ಯರಾದ ಶಶಿಕಲಾ ರಮೇಶ್, ಹಾಡ್ಯ ಮಹದೇವಸ್ವಾಮಿ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ರಮೇಶ್, ಎಚ್.ಎಸ್. ಜಗದೀಶ್, ಹಳಿಯೂರು ಕೃಷ್ಣಮೂರ್ತಿ ಇದ್ದರು.