ಅಂತರಸಂತೆ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ
ಅಂತರಸಂತೆ: ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗಳನ್ನು ಗ್ರಾಪಂ ಕಚೇರಿಯಲ್ಲಿ ಕೂಡಿಹಾಕಿ ಗ್ರಾಮಸ್ಥರು ಮತ್ತು ಸದಸ್ಯರು ಪ್ರತಿಭಟಿಸಿದರು. ಗ್ರಾಪಂ ಸದಸ್ಯರಾದ ಸೋಗಹಳ್ಳಿ ಪುಟ್ಟಸ್ವಾಮಿ ಹಾಗೂ ಸ್ವಾಮಿ ಅವರು ಗ್ರಾಪಂ ಅಧ್ಯಕ್ಷ ಲೀಲಾಶಂಕರ್, ಪಿಡಿಒ ಪುರುಷೋತ್ತಮ್ ಹಾಗೂ ಇತರರನ್ನು ಪಂಚಾಯಿತಿ ಕಚೇರಿ ಒಳಗೆ ಕೂಡಿಹಾಕಿ ಪ್ರತಿಭಟಿಸಿದರು. ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಪ್ರತಿಭಟಿಸಿದ ಸಾರ್ವಜನಿಕರು 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅನೇಕ ಕಾಮಗಾರಿ ಹಾಗೂ ಶೌಚಾಲಯ ಮತ್ತು ದನದ ಕೊಟ್ಟಿಗೆ ನಿರ್ಮಿಸಿ ಫಲಾನುಭವಿಗಳಿಂದ ಸಾವಿರಾರು ರು. ವಸೂಲಿ ಮಾಡಿ ಎನ್ಎಂಆರ್ ಪಾವತಿಸಿ ಸಪ್ಲೆ ಬಿಲ್ ಮಾಡಿಕೊಡಲು ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ಕಚೇರಿಗೆ ಅಧ್ಯಕ್ಷರ ಗೈರು: ಅಧಿಕಾರ ಸ್ವೀಕರಿಸಿ 1 ವರ್ಷವಾದರೂ ಪಂಚಾಯಿತಿ ಕಚೇರಿಗೆ ಬಾರದ ಅಧ್ಯಕ್ಷರು ಎಲ್ಲಾ ಕಡತಗಳನ್ನು ಮನೆಗೆ ತರಿಸಿಕೊಂಡು ಸಹಿ ಮಾಡುತ್ತಿದ್ದಾರೆ. ಕಾಮಗಾರಿ ಇಂತಿಷ್ಟು ಎಂದು ಕಮಿಷನ್ ಪಡೆಯುತ್ತಿದ್ದಾರೆ. ಆದ್ದರಿಂದ ಈ ಪ್ರತಿಭಟನೆ ಮಾಡಬೇಕಾಯಿತು ಎಂದು ಗ್ರಾಪಂ ಸದಸ್ಯರು ತಿಳಿಸಿದರು. ಇನ್ನೆರಡು ದಿನದಲ್ಲಿ ಕಾಮಗಾರಿಗಳ ಬಿಲ್ ಪಾವತಿ ಆಗದಿದ್ದರೆ ಪಂಚಾಯ್ತಿಗೆ ಶಾಶ್ವತವಾಗಿ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು.
ಶಾಲಾ ದಾಖಲಾತಿಗೆ ಸೂಚನೆ
ಎಚ್.ಡಿ. ಕೋಟೆ: ತಾಲೂಕಿನಲ್ಲಿ 2014-15ನೇ ಸಾಲಿನಲ್ಲಿ ಯರಹಳ್ಳಿಯ ಬಿ.ಜಿ. ಪಬ್ಲಿಕ್ ಶಾಲೆ ಹಾಗೂ ಎಚ್.ಡಿ. ಕೋಟೆಯ ಏಕ್ಸಲ್ ಪಬ್ಲಿಕ್ ಶಾಲೆಗೆ ಮಕ್ಕಳನ್ನು ದಾಖಲಿಸಬಹುದು ಎಂದು ಬಿಇಒ ಉದಯಕುಮಾರ್ ತಿಳಿಸಿದರು. ಉಪ ನಿರ್ದೇಶಕರು ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಬಹುದು ಎಂದರು.