ಕನ್ನಡಪ್ರಭ, ಇಂಡಿಯನ್ ಎಕ್ಸ್ಪ್ರೆಸ್ನಿಂದ ಶಿಕ್ಷಣ ಮಾರ್ಗದರ್ಶನ
ಮೈಸೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ತರಗತಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಸದ್ವಿದ್ಯಾ ಪ್ರೌಢಶಾಲೆಯ ವತಿಯಿಂದ ಸೋಮವಾರ ಮಕ್ಕಳಿಗೆ ಮಾರ್ಗದರ್ಶನ ನೀಡಲಾಯಿತು.
ನಗರದ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳು ಶಾಲೆಯ ಬಗ್ಗೆ ವಿವರವಾಗಿ ತಿಳಿಸಿದರು. ಇದೇ ವೇಳೆ ಕನ್ನಡಪ್ರಭ ಹಾಗೂ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಮಾಧ್ಯಮ ಸಮೂಹದಿಂದ ಶಿಕ್ಷಣದ ಬಗ್ಗೆ ಮಾಹಿತಿ ನೀಡಲಾಯಿತು. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯೂ ವಿದ್ಯಾರ್ಥಿಗಳಿಗಾಗಿ ಹೊರತಂದಿರುವ ವಿಶೇಷ ಆವೃತ್ತಿಯಲ್ಲಿ ಮಕ್ಕಳ ಕಲಿಕೆಗೆ ಅವಶ್ಯಕವಾದ ವಿಜ್ಞಾನ, ಸಾಮಾನ್ಯಜ್ಞಾನ, ಸುಡುಕೋ, ಕಾಮಿಕ್ಸ್, ಕ್ವಿಜ್ ಇನ್ನು ಮುಂತಾದ ವಿಷಯ ಹೂರಣವನ್ನು ಒಳಗೊಂಡಿತ್ತು. ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಗೋಪಿನಾಥ್, ಪ್ರಮತಿ ಹಿಲ್ ವ್ಯೂ ಅಕಾಡೆಮಿ ಪ್ರಾಂಶುಪಾಲ ಸುದರ್ಶನ್, ಸಂಪನ್ಮೂಲ ವ್ಯಕ್ತಿ ಕೃಷ್ಣಪ್ರಸಾದ್, ಸಹಾಯಕ ಪ್ರಸರಣಾ ವ್ಯವಸ್ಥಾಪಕ ಎಚ್.ಎನ್. ಗಣೇಶ್ ಭಾಗವಹಿಸಿದ್ದರು.