ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಬಿದ್ದ ಕಾರು
ಪಿರಿಯಾಪಟ್ಟಣ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದ ಘಟನೆ ತಾಲೂಕಿನ ಕಿರನಲ್ಲಿ ಗೇಟ್ ಬಿ.ಎಂ. ರಸ್ತೆಯಲ್ಲಿ ಜರುಗಿದೆ. ಮೈಸೂರಿನಿಂದ ಕಾರಿನಲ್ಲಿ ಮಡಿಕೇರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅತಿಯಾದ ವೇಗವೇ ಈ ಅನಾಹುತಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
52 ಲಕ್ಷ ಸಾಲ ಸೌಲಭ್ಯ ವಿತರಣೆ
ಹುಣಸೂರು: ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2013-14ನೇ ಸಾಲಿನ ವಿವಿಧ ಯೋಜನೆಗಳ ಫಲಾನುಭವಿಗಳಿಗೆ 52 ಲಕ್ಷ ಸಾಲಸೌಲಭ್ಯವನ್ನು ಶಾಸಕ ಎಚ್.ಪಿ. ಮಂಜುನಾಥ್ ವಿತರಿಸಿದರು. ಪಟ್ಟಣದ ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಮುಸ್ಲಿಂ, ಜೈನ್ ಹಾಗೂ ವಿಶೇಷ ಕ್ರಿಶ್ಚಿಯನ್ ಸಮುದಾಯದ ಒಟ್ಟು 157 ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ನಿಗಮದ ಜಿಲ್ಲಾ ವ್ಯವಸ್ಥಾಪಕ ಮಾದುರಾವ್, ಸಹಾಯಕ ಅಧಿಕಾರಿ ಕಿಶೋರ್ ಇದ್ದರು.
ಹೊಗೆಸೊಪ್ಪಿನಿಂದ ದುಷ್ಪರಿಣಾಮ
ಹುಣಸೂರು: ಹೊಗೆಸೊಪ್ಪು ಬೆಳೆಯಿಂದಾಗುವ ಅನಾಹುತ, ಮನುಷ್ಯನ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ, ಪರಿಸರ ಹಾನಿಯ ಬಗ್ಗೆ ಸಹಾಯಕ ಕೃಷಿ ಅಧಿಕಾರಿ ರಾಜನ್ ಆತಂಕ ವ್ಯಕ್ತಪಡಿಸಿದರು. ತಾಲೂಕಿನ ಹನಗೋಡು ಹೋಬಳಿ ಶೆಟ್ಟಹಳ್ಳಿಹಾಡಿಯಲ್ಲಿ ಹೋಬಳಿ ಮಟ್ಟದ 2014-15ನೇ ಸಾಲಿನ ಭೂ ಚೇತನ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದ ಅವರು, ಭೂಮಿಯನ್ನು ಹಸನು ಮಾಡಿಕೊಂಡು ಬಿತ್ತನೆ ಕಾರ್ಯಪ್ರಾರಂಭಿಸಿರುವ ರೈತರಿಗೆ ಬೀಜೋಪಚಾರ ಮಾಡುವ ಬಗ್ಗೆ ಯಾವ ಬೆಳೆಗಳಿಗೆ ಪೋಷಕಾಂಶ ಗೊಬ್ಬರಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು, ಯಾವ ವೇಳೆ ಬಳಸಬೇಕೆಂಬ ಮಾಹಿತಿ ನೀಡಿದರು. ರೈತರು ತಮ್ಮ ಭೂಮಿಯಲ್ಲಿ ತೋಟಗಾರಿಕೆಯ ಗಿಡಗಳನ್ನು ಬೆಳೆಸಿ ಸುತ್ತಲು ಹಸಿರು ಬೇಲಿ ನಿರ್ಮಿಸಿಕೊಂಡು ಅದರಿಂದ ಸಿಗುವ ಹಸಿರು ಸೊಪ್ಪುಗಳನ್ನು ಜಾನುವಾರುಗಳಿಗೆ ಮೇವು ಹಾಗೂ ಗೊಬ್ಬರಕ್ಕೆ ಬಳಸಿಕೊಂಡು ಭೂಮಿಯ ಫಲವತ್ತತ್ತೆಯನ್ನು ಹೆಚ್ಚಿಸಿ ಹೆಚ್ಚಿನ ಇಳುವರಿ ಪಡೆಯುವ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಉಳಿಸುವಮತೆ ಮನವಿ ಮಾಡಿದರು. ಸಹಾಯಕ ಕೃಷಿ ನಿರ್ದೇಶಕ ಜೆ. ವೆಂಕಟೇಶ್ ಮಾತನಾಡಿದರು. ನೇರಳಕುಪ್ಪೆ ಗ್ರಾಮ ಪಂಚಾಯ್ತಿ ಸದಸ್ಯರಾದ ಪಿ.ಕೆ. ರಾಮು ಕಾರ್ಯಾಗಾರ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಶೆಟ್ಟಹಳ್ಳಿಹಾಡಿಯ ಸುತ್ತಮುತ್ತಲಿನ ಗ್ರಾಮ ರೈತರು, ರೈತಮಹಿಳೆಯರು, ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಹನಗೋಡು ಹೋಬಳಿ ರೈತ ಅನುವುಗಾರ ಕೆ.ಪಿ. ರಾಘವೇಂದ್ರ ಭಾಗವಹಿಸಿದ್ದರು