'ಕಾಂಗ್ರೆಸ್‌ನಿಂದ ಅಭಿವೃದ್ಧಿ ಕಾರ್ಯ'
ಟಿ. ನರಸೀಪುರ: ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಪಿ.ಗಿರೀಶ್ ಹೇಳಿದರು. ಆಲನಹಳ್ಳಿಯಲ್ಲಿರುವ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ನಿವಾಸದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಹಾಗೂ ಡಿ.ದೇವರಾಜು ಅರಸು ನಿಗಮದಿಂದ ಮಂಜೂರಾದ ಸಹಾಯಧನ ಸಾಲದ ಚೆಕ್ ಅನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿ ಹೊಂದಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಬಡತನ ನಿವಾರಣೆಗಾಗಿ ಅಲ್ಪಸಂಖ್ಯಾತ ಹಾಗೂ ದೇವರಾಜ ಅರಸು ಅಭಿವೃದ್ಧಿ ನಿಗಮಗಳಿಗೆ ಕೋಟ್ಯಂತರ ರುಪಾಯಿ ಅನುದಾನ ನೀಡುತ್ತಿದ್ದಾರೆ. ಪಡೆದ ಸಾಲವನ್ನು ವ್ಯರ್ಥವಾಗಿಸದೆ ಉದ್ದೇಶಿತ ಕಾರ್ಯಕ್ಕೆ ಉಪಯೋಗಿಸಿ ಉತ್ತಮ ಬದುಕು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಸಹಾಯಧನ ವಿತರಣೆ: ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್ ಮಾತನಾಡಿ, ಲೋಕೋಪಯೋಗಿ ಸಚಿವರ ಸೂಚನೆ ಮೇರೆಗೆ ನರಸೀಪುರ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರಿಗೆ ಸ್ವಾವಲಂಬನೆ, ಮೈಕ್ರೋ ಹಾಗೂ ಶ್ರಮಶಕ್ತಿ ಯೋಜನೆಯಡಿ 109 ಫಲಾನುಭವಿಗಳಿಗೆ 26.70 ಲಕ್ಷ ಸಾಲ ಸೌಲಭ್ಯ ಮತ್ತು ಹಿಂದುಳಿದ ವರ್ಗಗಳ ಜನರಿಗೆ ಚೈತನ್ಯ, ಸ್ವಯಂ ಉದ್ಯೋಗ ಹಾಗೂ ಸಾಂಪ್ರದಾಯಿಕ ಯೋಜನೆಯಡಿ 188 ಫಲಾನುಭವಿಗಳಿಗೆ 60 ಲಕ್ಷ ಸಾಲ ಸೌಲಭ್ಯ ಲಭ್ಯವಾಗಿದೆ. ಅಲ್ಲದೆ ಗಂಗಾ ಕಲ್ಯಾಣ ಯೋಜನೆಯಡಿ ಸುಮಾರು 13 ಮಂದಿಗೆ 25 ಲಕ್ಷ ಸಹಾಯಧನವನ್ನು ಸರ್ಕಾರದಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು. ತಾಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಡಿಸಿಸಿ ಸದಸ್ಯ ಕುಕ್ಕೂರು ಗಣೇಶ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎ.ಎನ್.ಸ್ವಾಮಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಆರ್.ಮಾಧುರಾವ್, ಸಹಾಯಕ ಕಿಶೋರ್, ಡಿ.ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ಜ್ಞಾನಪ್ರಕಾಶ್, ಲೋಕೋಪಯೋಗಿ ಇಲಾಖೆ ಎಇಇ ಸಿ.ನಟರಾಜನ್, ಮುಖಂಡರಾದ ಟಿ.ಎಚ್. ಮಂಜುನಾಥ್, ಮಾವಿನಹಳ್ಳಿ ಪುಟ್ಟಸ್ವಾಮಿ, ಮೂಗೂರು ಮೂರ್ತಿ, ಕುಮಾರ, ಪಟೇಲ್ ನಟರಾಜು, ಡೇರಿ ನಾಗೇಂದ್ರ, ಪಿಎ ಬಸವರಾಜು ಇದ್ದರು.
ರೈತನ ಕುಟುಂಬಕ್ಕೆ ಶಾಸಕರ ಸಾಂತ್ವನ
ಹುಣಸೂರು: ಬಿ.ಆರ್. ಕಾವಲ್ ಗ್ರಾಮದಲ್ಲಿ ಎತ್ತಿನ ದಾಳಿಗೆ ಒಳಗಾಗಿ ಮೃತಪಟ್ಟ ರೈತ ಶಿವಬೋವಿ ಮನೆಗೆ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ ಸಾಂತ್ವನ ಹೇಳಿದರು. ರೈತ ಶಿವಬೋವಿ ಭಾನುವಾರ ತನ್ನ ಜಮೀನಿನಲ್ಲಿ ಉಳುಮೆ ಮಾಡುವಾಗ ಎತ್ತು ಒದ್ದಿದ್ದರಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಮೃತ ಶಿವಬೋವಿ ನಿವಾಸಕ್ಕೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ವೈಯಕ್ತಿಕ ನೆರವು ನೀಡಿ, ಕೃಷಿ ಇಲಾಖೆಯಿಂದ ಆರ್ಥಿಕ ನೆರವು ಕೊಡಿಸುವುದಾಗಿ ಭರವಸೆ ನೀಡಿದರು. ನೇರಳಕುಪ್ಪೆ ಗ್ರಾಪಂ ಉಪಾಧ್ಯಕ್ಷ ಕೃಷ್ಣೇಗೌಡ, ಮುಖಂಡರಾದ ಪ್ರಭಾಕರ ಹೆಗ್ಡೆ, ಶ್ರೀನಿವಾಸೇಗೌಡ, ಯ. ಸ್ವಾಮಿಗೌಡ ಇದ್ದರು.