ನಿವೇಶನ ಹಕ್ಕುಪತ್ರ ವಿಳಂಬ ಖಂಡಿಸಿ ಧರಣಿ
ಸರಗೂರು: ಪಟ್ಟಣದಲ್ಲಿ ವಾಜಪೇಯಿ ವಸತಿ ಯೋಜನೆಯಡಿ ನಿವೇಶನದ ಹಕ್ಕು ಪತ್ರ ವಿಳಂಬ ಖಂಡಿಸಿ, ಫಲಾನುಭವಿಗಳು ಪಪಂ ಕಚೇರಿಗೆ ಮುತ್ತಿಗೆ ಹಾಕಿದರು. ಕಳೆದ ಮೂರು ವರ್ಷಗಳಿಂದಲೂ ಬಡವರಾದ ನಮಗೆ ಹಕ್ಕು ಪತ್ರ ವಿತರಣೆ ಮಾಡಿಲ್ಲ. ನಮಗೆ ಮನೆ ಇಲ್ಲದೆ ನಮ್ಮ ಪಾಡು ಹೇಳತೀರದಾಗಿದೆ. ಬಾಡಿಗೆ ಕಟ್ಟಲು ಶಕ್ತರಲ್ಲದ ಬಡವರಿಗೆಂದೆ ನಿವೇಶನ ಹಂಚಿ ನಂಬರ್ ನೀಡಿ ಮೂರು ವರ್ಷಗಳೆ ಕಳೆದಿದೆ. ಆದರೆ ನಾವು ಗುಡಿಸಲನ್ನಾದರು ಕಟ್ಟಲು ಹಕ್ಕು ಪತ್ರವನ್ನೂ ನೀಡಿಲ್ಲ. ನಮಗೆ ಹಕ್ಕು ಪತ್ರ ನೀಡುವಂತೆ ಶಾಸಕ ಎಸ್. ಚಿಕ್ಕಮಾದು ಅವರ ಬಳಿ ಫಲಾನುಭವಿಗಳು ಅಳಲು ತೋಡಿಕೊಂಡರು.
ಶಾಸಕರು ಮಾತನಾಡಿ, 254 ಫಲಾನುಭವಿಗಳು ಆಯ್ಕೆಯಾಗಿದ್ದು, ಅದರಲ್ಲಿ 38 ಫಲಾನುಭವಿಗಳನ್ನು ತಡೆ ಹಿಡಿಯಲಾಗಿದ್ದು, ಮೇಲಾಧಿಕಾರಿಗಳು ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಆರಿಸಬೇಕೇಂದು ಹೇಳಿದ ಕಾರಣ ತಡವಾಗಿದೆ. ಮೊದಲ ಹಂತದಲ್ಲಿ 216 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಪಪಂ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಂಸದ ಆರ್.ಧ್ರುವನಾರಾಯಣ್ ಅವರ ದಿನಾಂಕವನ್ನು ನಿಗದಿಪಡಿಸಿ, ಸರ್ವಪಕ್ಷದ ಮುಖಂಡರನ್ನು ಆಹ್ವಾನಿಸಿ ಕಾರ್ಯಕ್ರಮ ಮಾಡಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.