'ಪಠ್ಯೇತರ ಚಟುವಟಿಕೆಯಿಂದ ವ್ಯಕ್ತಿತ್ವ ನಿರ್ಮಾಣ'
ಮೈಸೂರು: ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ನೀ. ಗಿರಿಗೌಡ ಹೇಳಿದರು.
ನಾಗನವ ಕಲಾ ಸಾಹಿತ್ಯ ವೇದಿಕೆ ಮತ್ತು ಹಿರಣ್ಮಯಿ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಗೌರಿಶಂಕರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯ ತಿಳಿದುಕೊಳ್ಳುವುದರಿಂದ ಜ್ಞಾನ ಬೆಳೆಯುತ್ತದೆ. ಅದೇ ರೀತಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು. ಶೈಕ್ಷಣಿ ಸಂಸ್ಥೆಗಳು ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಸಮಾನತೆ ಭಾವದಿಂದ ಮಕ್ಕಳನ್ನು ಬೆಳೆಸಬೇಕು. ಮಕ್ಕಳಿಗೆ ವಚನ ಸಾಹಿತ್ಯ, ಕನ್ನಡ ಸಾಹಿತ್ಯವನ್ನು ಪರಿಚಯಿಸಬೇಕು. ಹಳಗಳನ್ನಡವು ಪಂಡಿತರಿಗೆ ಕಲ್ಪವೃಕ್ಷವಾದರೆ, ವಚನ ಸಾಹಿತ್ಯ ಕಲಿಯುವ ಕಾಮಧೇನುವಾಗಿದೆ ಎಂದರು. ಇದೇ ವೇಳೆ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ರಕ್ಷಿತಾ, ರಮೇಶ್ ಅವರನ್ನು ಅಭಿನಂದಿಸಲಾಯಿತು. ಹರಿ ವಿದ್ಯಾಲಯದ ಎಂ.ಕೆ. ವೆಂಕಟೇಶಯ್ಯ ಅಧ್ಯಕ್ಷತೆ ವಹಿಸಿದ್ದರು. ಹೊಮ್ಮ ಮಂಜುನಾಥ, ಎ. ಸಂಗಪ್ಪ, ಗೌರಿ ಶಂಕರ ಪ್ರೌಢಶಾಲೆ ಮುಖ್ಯಶಿಕ್ಷಕ ಮುದ್ದಪ್ಪ, ಸಂಪತ್ತು ಇದ್ದರು.
ಒಕ್ಕಲೆಬ್ಬಿಸುವಂತೆ ಹೇಳಿ ಕಿರುಕುಳ
ಮೈಸೂರು: ತಾಲೂಕಿನ ಕಸಬಾ ಹೋಬಳಿಯ ಕುರುಬಾರಹಳ್ಳಿ, ಆಲನಹಳ್ಳಿ ಮತ್ತು ಜಯಪುರ ಹೋಬಳಿಯ ಚೌಡಹಳ್ಳಿಯ ಗ್ರಾಮಗಳ ಭೂ ಮಾಲೀಕರಿಗೆ ಜಿಲ್ಲಾಡಳಿತ ಒಕ್ಕಲೆಬ್ಬಿಸುವಂತೆ ಆದೇಶ ನೀಡಿ ಕಿರುಕುಳ ನೀಡುತ್ತಿದೆ ಎಂದು ಚಾಮುಂಡಿ ತಪ್ಪಲಿನ ಭೂ ಮಾಲೀಕರ ಸಂಘ ಆರೋಪಿಸಿದೆ. ಕುರುಬಾರಹಳ್ಳಿ, ಆಲನಹಳ್ಳಿ ಜಮೀನು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿರುವ ನಾರಾಯಣಸ್ವಾಮಿ ಆಯೋಗವು ತನಿಖೆ ನಡೆಸುತ್ತಿರುವಾಗಲೆ ಈ ರೀತಿಯ ಆದೇಶ ಹೊರಡಿಸಿರುವುದು ಅಸಿಂಧುವಾಗಿದೆ. ಜಿಲ್ಲಾಧಿಕಾರಿ ನೀಡಿರುವ ಸಂವಿಧಾನ ವಿರೋಧಿ ಆದೇಶವನ್ನು ಕೂಡಲೇ ರದ್ದುಗೊಳಿಸುವಂತೆ ಸಂಘದ ಅಧ್ಯಕ್ಷ ಡಾ.ತಲವಾನೆ ಕೃಷ್ಣ, ಕಾರ್ಯದರ್ಶಿ ಕೆ.ಮನು ಸರ್ಕಾರವನ್ನು ಒತ್ತಾಯಿಸಿದ್ದಾರೆ.