ಮಹಾತ್ಮರ ಮಾತು ಮೆಲುಕು ಹಾಕಿ
ಸುತ್ತೂರು: ಮಹಾತ್ಮರ ಮಾತುಗಳಿಗೆ ಜಗತ್ತನ್ನು ಸುಂದರಗೊಳಿಸುವ ಶಕ್ತಿ ಇರುವುದರಿಂದ ಅಂಥ ಮಾತುಗಳನ್ನು ಮೆಲುಕು ಹಾಕುತ್ತಿರಬೇಕು ಎಂದು ಬಿಜಾಪುರ ಜ್ಞಾನಯೋಗಾಶ್ರವುದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ಗ್ರಾಮೀಣ ಯುವಜನರಿಗಾಗಿ ಆಯೋಜಿಸಿರುವ ನಾಲ್ಕು ದಿನಗಳ ಶಿಬಿರದಲ್ಲಿ ಮಂಗಳವಾರ ಪ್ರವಚನ ನೀಡಿದ ಅವರು, ಮಹಾತ್ಮರ ಮಾತುಗಳಿಗೆ ಅಷ್ಟು ಬೆಲೆ. ಆದ್ದರಿಂದ ಅವನ್ನು ಕೇಳಬೇಕು. ಕೇಳಿದ ಓದಿದ ಮಾತನ್ನು ಮೆಲುಕು ಹಾಕಬೇಕು. ಅಂಥ ಮಾತು ಜೀವನ ಸಂಗ್ರಹದಲ್ಲಿರಿಸಿಕೊಂಡಿದ್ದರೆ ಕಷ್ಟದ ಸಂದರ್ಭದಲ್ಲಿ ಸಾಂತ್ವನ ನೀಡುತ್ತದೆ. ಕತ್ತಲೆಯ ನಡುವೆ ಬೆಳಕು ನೀಡುತ್ತವೆ. ಎದೆಯ ಕಿಸೆಯೊಳಗೆ ಇಟ್ಟುಕೊಳ್ಳಬೇಕು ಎಂದರು.
ಪೃಥ್ವಿಯೊಳಗೆ ಮೂರು ಮಹಾರತ್ನಗಳಿವೆ. ಆದರೆ ಜನ ತಪ್ಪು ತಿಳಿದುಕೊಂಡಿದ್ದಾರೆ. ಕಲ್ಲಿನ ಹರಳನ್ನು ರತ್ನವೆಂದು ಭಾವಿಸಿದ್ದಾರೆ. ನಿಜವಾದ ಮೂರು ರತ್ನಗಳು ಜಗತ್ತಿನಲ್ಲಿವೆ. ಯಾವುದರಿಂದ ನಮ್ಮ ಜೀವನ ಸಮರ್ಥ ಸಮೃದ್ಧವಾಗುತ್ತದೆಯೋ ಅದು ರತ್ನ. ಜಗತ್ತಿನಲ್ಲಿ ಅನ್ನ, ನೀರು ಮತ್ತು ಮಾತು ಇವೇ ಆ ಮೂರು ರತ್ನಗಳು. ಇವಿಲ್ಲದಿದ್ದರೆ ಮಿಕ್ಕೆಲ್ಲಾ ಇದ್ದರೆ ಬದುಕು ನಡೆಯಲು ಸಾಧ್ಯವೇ ಎಂಬುದನ್ನು ಗಮನಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಾಧ್ಯ ಮೌಲ್ಯ ನಗಣ್ಯ: ಜೀವನ ಮೌಲ್ಯಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಎಸ್.ಎಸ್. ರಮೇಶ್, ಮೊದಲಿಗೆ ನನ್ನನ್ನು ನಾನು ಪ್ರೀತಿಸಬೇಕು, ತಿದ್ದಿಕೊಳ್ಳಬೇಕು. ಅದನ್ನೇ ಗೀತೆ, ಮಹಾಭಾರತ ಎಲ್ಲವೂ ಹೇಳಿದ್ದು. ನಮ್ಮ ಮಾತಿಗೆ ಬೆಲೆ ಬರುವುದು ಅದು ನಡೆಯಲ್ಲಿ, ಪ್ರತಿಫಲನಗೊಂಡಾಗ ಮಾತ್ರ. ಹಣ ಅತ್ಯುತ್ತಮವಾದ ಸಾಧನ. ಅದು ನಮ್ಮ ಬಯಕೆಗಳನ್ನು ಈಡೇರಿಸಬಹುದು. ಆದರೆ ಅದೇ ಆಹಾರವಲ್ಲ. ಕುಡಿಯುವ ನೀರಲ್ಲ. ಆಧುನಿಕ ಬದುಕಲ್ಲಿ ಸಾಧನ ಮೌಲ್ಯಕ್ಕೆ ಆದ್ಯತೆ ಕೊಟ್ಟಿದ್ದೇವೆಯೇ ಹೊರತು ಸಾಧ್ಯ ಮೌಲ್ಯ ನಗಣ್ಯವಾಗುತ್ತಿದೆ ಎಂದು ವಿಷಾದಿಸಿದರು.
ಸೇವಾಭಾವನೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಪ್ರೊ.ಜಿ.ಎಸ್. ಜಯದೇವ್, ನಮ್ಮನ್ನು ನಾವು ಮರೆತು ಕಾಯಕದಲ್ಲಿ ತೊಡಗಿಸಿಕೊಂಡರೆ ನಮ್ಮನ್ನು ಶಕ್ತಿಯೊಂದು ಕಾಯುತ್ತದೆ. ನಿಸ್ವಾರ್ಥ ಸೇವೆಯ ಫಲ ಖಂಡಿತ ದೊರಕುತ್ತದೆ. ಜಾಗತೀಕರಣದಿಂದಾಗಿ ದೈಹಿಕ ಶ್ರಮ ಕಡಿಮೆಯಾಗಿದೆ. ಹಸಿವಿನಿಂದ ನರಳುವಿಕೆ ಶುರುವಾಗಿದೆ ಎಂದರು.