ಸರಗೂರಿನಲ್ಲಿ ಅದ್ಧೂರಿ ಲಕ್ಷ್ಮೀನರಸಿಂಹ ರಥೋತ್ಸವ
ಸರಗೂರು: ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಬೆಳಗಿನ ಜಾವದಿಂದಲೆ ಹೋಮ, ಹವನ ಪೂಜಾ ಕಾರ್ಯಕ್ರಮಗಳು ನಡೆದವು. ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಭೂದೇವಿಯ ಮೂರ್ತಿಯನ್ನು ರಥದ ಮೇಲೆ ಕೂರಿಸಿ ಹೂವಿನಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಲಾಯಿತು. ರಥೋತ್ಸವದ ಅಂಗವಾಗಿ ಲೇ. ನರಸಿಂಹೇಗೌಡ ಮಕ್ಕಳಾದ ನರಸಿಂಹಮೂರ್ತಿ ಸಹೋದರರು ಅನ್ನದಾನ ಹಾಗೂ ಮಜ್ಜಿಗೆ, ಕೋಸಂಬರಿ ವಿತರಿಸಿದರು.
ರಥವನ್ನು ಮಂಗಳವಾದ್ಯ ಪೂರ್ಣಕುಂಭ ಕಳಸದೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿ, ನಂತರ ದೇವಸ್ಥಾನದಲ್ಲಿ ಪೂಜೆ ಆದ ನಂತರ ಪ್ರಸಾದ ವಿತರಿಸಲಾಯಿತು. ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮಣೆಗೌಡ, ಕೆ. ಓಬಳೇಗೌಡ, ದಾಸೇಗೌಡ, ಪಪಂ ಸದಸ್ಯ ಎಸ್.ಎನ್. ನಾಗರಾಜು, ಮಾಜಿ ಸದಸ್ಯ ನಾಗರಾಜು, ಮುಖಂಡರು, ಭಕ್ತರು ಭಾಗವಹಿಸಿದ್ದರು.