ಸಾಧಿಸುವ ಛಲ ಇದ್ದವರಿಗೆ ಸರ್ಕಾರಿ ಕೆಲಸ ಬೇಕಿಲ್ಲ
ಕ.ಪ್ರ. ವಾರ್ತೆ ಟಿ ಮೈಸೂರು ಟಿ ಜೂ.10
ಏನಾದರೂ ಸಾಧಿಸುತ್ತೇನೆ ಎನ್ನುವವರಿಗೆ ಸರ್ಕಾರಿ ಉದ್ಯೋಗವೇ ಬೇಕಿಲ್ಲ. ಸ್ವಂತ ಸಾಮರ್ಥ್ಯದಿಂದಲೆ ಮೇಲೆ ಬರುತ್ತಾರೆ ಎಂದು ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.
ಕುವೆಂಪುನಗರದ ಚಿಕ್ಕಮ್ಮಾನಿಕೇತನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೆ.ಆರ್. ಕ್ಷೇತ್ರ ವ್ಯಾಪ್ತಿಯ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಅವರು ಮಾತನಾಡಿದರು.
ಸರ್ಕಾರಿ ಕೆಲಸವೆ ಬೇಕು ಎಂಬುದಿಲ್ಲ. ಸರ್ಕಾರಿ ಕೆಲಸಕ್ಕೆ ಕಾಯುವವರು ಸೋಮಾರಿಗಳು. ಖಾಸಗಿ ಸಂಸ್ಥೆಗಳಲ್ಲಿಯೂ ಈಗ ಹೆಚ್ಚು ಹೆಚ್ಚು ಸಂಬಳ ನೀಡಲಾಗುತ್ತಿದೆ. ಕೆಲಸ ಸಿಕ್ಕಿದರೆ ಸಾಕು ಎಂದು ಕೂರಬಾರದು. ಕೆಲಸ ಸಿಕ್ಕಿದ ಮೇಲೂ ಓದಿ ಏನಾದರೂ ಸಾಧಿಸಬೇಕು. ಇಂದು ವಿಫುಲ ಅವಕಾಶಗಳು ಇವೆ. ಆದ್ದರಿಂದ ಸಾಧಿಸುತ್ತೇವೆ ಎನ್ನುವವರಿಗೆ ಸರ್ಕಾರಿ ಕೆಲಸವೆ ಬೇಕಿಲ್ಲ. ಸ್ವಂತ ಸಾಮರ್ಥ್ಯದಿಂದ ಮೇಲೆ ಬರಬಹುದು ಎಂದರು.
ದೇಶ ಮುನ್ನಡೆಸುವ ಉತ್ತಮ ಪ್ರಜೆಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕು. ಪ್ರತಿ ಮಕ್ಕಳಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವುದು ಮುಖ್ಯ. ನಾನು ಕ್ಷೇತ್ರದ ಅಭಿವೃದ್ಧಿಯ ಹೊರತಾಗಿ ವೈಯಕ್ತಿಕವಾಗಿ ಉದ್ಯೋಗ ಮೇಳ ಮತ್ತು ಪ್ರತಿಭಾ ಪುರಸ್ಕಾರ ನೀಡುತ್ತಿರುವುದಾಗಿ ಅವರು ತಿಳಿಸಿದರು.
ಪ್ರತಿ ಶಾಲೆಯಿಂದ ಇಬ್ಬರು ಮಕ್ಕಳಂತೆ ಸುಮಾರು 70 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಾಜಿ ಮೇಯರ್‌ಗಳಾದ ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಪಾಲಿಕೆ ಸದಸ್ಯರಾದ ಜಿ.ಎಸ್. ಜಗದೀಶ್, ಉಮಾಮಣಿ, ಎಂ. ಸುನಿಲ್, ಬಿಇಒ ಬಿ.ಎನ್.ಶಿವರಾಮೇಗೌಡ, ಮಾಜಿ ಉಪ ಮೇಯರ್ ಬಿ.ಸಿದ್ದರಾಜು, ಕಾಂಗ್ರೆಸ್ ಮುಖಂಡ ಸತ್ಯಪ್ಪ ಇದ್ದರು.