21 ಬಾಲ್ಯ ವಿವಾಹಗಳಿಗೆ ತಡೆ
ಮೈಸೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ 21 ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.
ಇಲಾಖೆ ಉಪ ನಿರ್ದೇಶಕ ಎನ್.ಆರ್. ವಿಜಯ್, ಇಲಾಖೆಯ ಕಳೆದ ಸಾಲಿನ ಸಾಧನೆ ವಿವರ ನೀಡಿದ್ದು, ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆಯಡಿ ಸಂರಕ್ಷಣಾಧಿಕಾರಿಗಳನ್ನು ನೇಮಿಸಲಾಗಿದ್ದು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಕಾನೂನು ಸಲಹೆ ಹಾಗೂ ಉಚಿತ ಕಾನೂನು ನೆರವು ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 2013-14ನೇ ಸಾಲಿಗೆ ಒಟ್ಟು 255 ಪ್ರಕರಣ ದಾಖಲಾಗಿದ್ದು, 20 ಪ್ರಕರಣ ಇತ್ಯರ್ಥ ಗೊಳಿಸಲಾಗಿದೆ. ಬಾಲ್ಯ ವಿವಾಹ ನಿಷೇಧ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಮಹಿಳಾ ಮತ್ತು ಮಕ್ಕಳ ಸಾಗಣೆ ತಡೆಗಟ್ಟುವಿಕೆ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಹಾಗೂ ಅರಿವು ಮೂಡಿಸುವ ಮೂಲಕ ಕಳೆದ ವರ್ಷ 21 ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಯಶಸ್ವಿ ಆಗಿರುವುದಾಗಿ ತಿಳಿಸಿದರು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 9 ಶಿಶು ಅಭಿವೃದ್ಧಿ ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದು, 2,827 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಒಟ್ಟು 1,59,637 ಮಕ್ಕಳು, 19,216 ಗರ್ಭಿಣಿಯರು, 18,585 ಬಾಣಂತಿಯರು, 5,652 ಕಿಶೋರಿಯರು ಇಲಾಖೆಯಿಂದ ದೊರೆಯುವ ಪೂರಕ ಪೌಷ್ಟಿಕ ಆಹಾರ ಹಾಗೂ ಆರೋಗ್ಯ ತಪಾಸಣೆ ಸೌಲಭ್ಯ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಅಪೌಷ್ಟಿಕತೆ ನಿಯಂತ್ರಣ: ಅಪೌಷ್ಟಿಕ ಮಕ್ಕಳ ಪಾಲನೆ- ಪೋಷಣೆ ಯೋಜನೆಯಡಿ 2013ರ ಏ.1ರ ಅಂತ್ಯಕ್ಕೆ 1,241 ಇದ್ದ ಅಪೌಷ್ಟಿಕ ಮಕ್ಕಳ ಪ್ರಮಾಣ ಮೇ 1ರ ಅಂತ್ಯಕ್ಕೆ 791ಕ್ಕೆ ಇಳಿಕೆ ಆಗಿದೆ. 451 ಮಕ್ಕಳನ್ನು ಅಪೌಷ್ಟಿಕತೆಯಿಂದ ಹೊರತರಲಾಗಿದೆ. ಪ್ರಸ್ತುತ 791 ಅಪೌಷ್ಟಿಕ ಮಕ್ಕಳಿಗೆ ತಲಾ 9 ರಂತೆ ಹೆಚ್ಚುವರಿ ವೆಚ್ಚ ಭರಿಸಿ ಪೂರಕ ಪೌಷ್ಟಿಕ ಆಹಾರ, ವಾರದಲ್ಲಿ 3 ದಿನ ಮೊಟ್ಟೆ, ಆರೋಗ್ಯ ತಪಾಸಣೆ, ವೈದ್ಯಕೀಯ ಶುಶ್ರೂಷೆ ನೀಡುವ ಮೂಲಕ ಅಪೌಷ್ಟಿಕತೆ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗಿದೆ.
ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ ಕೇಂದ್ರದಲ್ಲಿ 6 ತಿಂಗಳಿಂದ 6 ವರ್ಷದವರೆಗಿನ ಮಕ್ಕಳಿಗೆ ಆಗಸ್ಟ್ 2013 ರಿಂದ ವಾರದಲ್ಲಿ 3 ದಿನ ಪ್ರತಿ ಮಗುವಿಗೆ 150 ಎಂಎಲ್ ಹಾಲು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 11,96,681 ಮಕ್ಕಳಿಗೆ ಈ ಯೋಜನೆಯಡಿ ಹಾಲು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 2,827 ಅಂಗನವಾಡಿ ಕೇಂದ್ರಗಳ ಪೈಕಿ 1,886 ಸ್ವಂತ ಕಟ್ಟಡ ಹಾಗೂ 941 ಇತರೆ ಕಟ್ಟಡಗಳಲ್ಲಿ ನಡೆಯುತ್ತಿವೆ ಎಂದರು.
ಸ್ತ್ರೀಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 6,515 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದ್ದು, ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿದ್ದು, ಮಹಿಳೆಯರ ಸಬಲೀಕರಣ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಭಾಗ್ಯಲಕ್ಷ್ಮಿ ಯೋಜನೆಯಡಿ 2006-07ನೇ ಸಾಲಿನಿಂದ 2012-13ನೇ ಸಾಲಿನವರೆಗೆ 79,436 ಫಲಾನುಭವಿಗಳಿಗೆ ಬಾಂಡ್ ವಿತರಿಸಲಾಗಿದೆ. 2013-14ನೇ ಸಾಲಿನಲ್ಲಿ ಒಟ್ಟು 6,517 ಫಲಾನುಭವಿಗಳಿಗೆ ರು. 1,244.39 ಲಕ್ಷಗಳ ವೆಚ್ಚ ಭರಿಸಿ ಬಾಂಡ್ ವಿತರಣೆ ಮಾಡಲಾಗಿದೆ. ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆಯಡಿ 2013-14ನೇ ಸಾಲಿನಲ್ಲಿ 477 ಫಲಾನುಭವಿಗಳು 39.39 ಲಕ್ಷ ಸಾಲ ಸೌಲಭ್ಯ ಪಡೆದಿದ್ದಾರೆ.