ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತುರ್ತು ರಕ್ಷಣಾ ತಂಡ ರಚನೆ

Rashmi Kasaragodu
Updated On : 13 Jun 2014, 2:04 am

ಕ.ಪ್ರ. ವಾರ್ತೆ ಟಿ ಮೈಸೂರು ಟಿ ಜೂ.12
ಮಳೆಗಾಲದಲ್ಲಿ ಒಳಚರಂಡಿ ದುರಸ್ತಿಗಾಗಿ ರಾತ್ರಿ ವೇಳೆಯಲ್ಲೂ ಕಾರ್ಯ ನಿರ್ವಹಿಸಲು, ತುರ್ತು ರಕ್ಷಣಾ ಸೇವೆ ಒದಗಿಸಲು ನಗರಪಾಲಿಕೆಯು ತಂಡವೊಂದನ್ನು ರಚಿಸಿದೆ ಎಂದು ಪಾಲಿಕೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮ.ವಿ. ರಾಮಪ್ರಸಾದ್ ಹೇಳಿದರು.
ನಗರಪಾಲಿಕೆ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ನಡೆದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಒಳಚರಂಡಿಯಿಂದ ಮನೆಗಳಿಗೆ ನೀರು ನುಗ್ಗುವುದು, ಕಟ್ಟಡಗಳು ಹಾನಿಯಾಗುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದೆ. ಹೀಗಾಗಿ ತುರ್ತು ಕಾರ್ಯಕ್ಕಾಗಿ ತಂಡವೊಂದನ್ನು ರಚಿಸಲಾಗಿದೆ ಎಂದರು.
ಈ ತಂಡದಲ್ಲಿ 15 ಜನ ಕಾರ್ಮಿಕರು ಇರುತ್ತಾರೆ. ಜೊತೆಗೆ 2 ಜಟ್ಟಿಂಗ್ ಯಂತ್ರ, ಸಕ್ಕಿಂಗ್ ಮತ್ತು ಡಿ-ಶೆಲ್ಟಿಂಗ್ ಯಂತ್ರಗಳನ್ನು ಒದಗಿಸಲಾಗಿದೆ. ಈ ಕಾರ್ಯಕ್ಕಾಗಿ ತಿಂಗಳಿಗೆ 3.4 ಲಕ್ಷ ಪಾಲಿಕೆಯು ಹೆಚ್ಚುವರಿಯಾಗಿ ಭರಿಸಲಿದೆ. ಮಳೆಗಾಲದಲ್ಲಿ ರಾತ್ರಿ ವೇಳೆಯಲ್ಲೂ ಒಳಚರಂಡಿ ತೊಂದರೆಯಾದರೆ, ಮನೆಗೆ ನೀರು ನುಗ್ಗಿದರೆ ಸಹಾಯವಾಣಿ- 94498 41196 ಸಂಪರ್ಕಿಸಬಹುದು ಎಂದು ತಿಳಿಸಿದರು.
594 ಕಿ.ಮೀ. ವಿಸ್ತೀರ್ಣ: ಮಹಾರಾಜರ ಕಾಲದಿಂದಲೂ ಮೈಸೂರಿನಲ್ಲಿ ಒಳಚರಂಡಿ ವ್ಯವಸ್ಥೆ ಇದೆ. ಒಳಚರಂಡಿ ಮಾರ್ಗದ ಪೈಪ್‌ಗಳನ್ನು ಅಳವಡಿಸಿದ್ದು, 594 ಕಿ.ಮೀ. ವಿಸ್ತೀರ್ಣ ಹೊಂದಿದೆ. 38 ಸಾವಿರ ಮ್ಯಾನ್‌ಹೋಲ್‌ಗಳಿದ್ದು, 200 ಎಂಎಲ್‌ಡಿ ಮಲಿನ ನೀರು ಪೈಪುಗಳಲ್ಲಿ ಹಾದು ಹೋಗುತ್ತದೆ ಎಂದರು.
ನಗರದಲ್ಲಿ 3 ಮಲಿನ ನೀರು ಶುದ್ಧೀಕರಣ ಘಟಕಗಳಿದ್ದು, ರಾಯನಕೆರೆಯಲ್ಲಿ 60 ಎಂಎಲ್‌ಡಿ, ಸೂಯೇಜ್ ಫಾರಂನಲ್ಲಿ 67.5 ಎಂಎಲ್‌ಡಿ ಹಾಗೂ ಕೆಸರೆಯಲ್ಲಿ 30 ಎಂಎಲ್‌ಡಿ ಪ್ರಮಾಣದ ಘಟಕಗಳಿವೆ. ಪಾಲಿಕೆಯಲ್ಲಿ ಹಾಲಿ 5 ಜಟ್ಟಿಂಗ್ ಯಂತ್ರ, 1 ಸಕ್ಕಿಂಗ್ ಯಂತ್ರ, 4 ಡಿ ಶಿಲ್ಟಿಂಗ್ ಯಂತ್ರಗಳಿದ್ದು, ಹೆಚ್ಚುವರಿಗಾಯಿ 15 ಡಿ ಶಿಲ್ಟಿಂಗ್ ಯಂತ್ರ ಹಾಗೂ 5 ಜಟ್ಟಿಂಗ್ ಯಂತ್ರಗಳನ್ನು ಹೊಸದಾಗಿ ಖರೀದಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಕಾರಂಜಿಕೆರೆ ಮತ್ತು ಕುಕ್ಕರಹಳ್ಳಿ ಕೆರೆಗೆ ಮಲಿನ ನೀರು ಸೇರುವುದನ್ನು ತಡೆಗಟ್ಟಲು ಮುಖ್ಯಮಂತ್ರಿಯವರ 2ನೇ ಹಂತದ ವಿಶೇಷ ಅನುದಾನದಲ್ಲಿ 5 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಸಂಪೂರ್ಣ ಒಳಚರಂಡಿ ಅಭಿವೃದ್ಧಿಗಾಗಿ 408 ಕೋಟಿ ನರ್ಮ್ ಯೋಜನೆಯ 2ನೇ ಹಂತದಲ್ಲಿ ಅನುಮೋದನೆ ಸಿಕ್ಕಿದ್ದು, ಒಳಚರಂಡಿ ಮಂಡಳಿಯವರು ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದರು. ನರ್ಮ್ ಯೋಜನೆಯಡಿ ಪಾಲಿಕೆಯ 47 ವಾರ್ಡ್‌ಗಳಿಗೆ 24್ಗ7 ನೀರು ಒದಗಿಸುವ ಕಾರ್ಯವು ಪ್ರಗತಿಯಲ್ಲಿದೆ. ಉಳಿದ 18 ವಾರ್ಡ್‌ಗಳಿಗೂ ನರ್ಮ್ 2ನೇ ಹಂತದಲ್ಲಿ ನೀರು ಒದಗಿಸಲು ಯೋಜನೆ ಸಿದ್ಧವಾಗಿದ್ದು, ಅನುಮೋದನೆ ಸಿಕ್ಕಿದೆ. ಬೆಳಗೊಳ, ಮೇಳಾಪುರ, ಹೊಂಗಳ್ಳಿ ಮತ್ತು ಕಬಿನಿಯಿಂದ ನಗರಕ್ಕೆ ಒಟ್ಟಾರೆ 247 ಎಂಎಲ್‌ಡಿ ನೀರು ಸರಬರಾಜು ಆಗುತ್ತಿದೆ. ಈ ಬಾರಿ ಬೇಸಿಗೆಯಲ್ಲಿ ನಗರದಲ್ಲಿ ನೀರಿನ ತೊಂದರೆ ಹೆಚ್ಚಾಗಿರಲಿಲ್ಲ ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಶಿವಕುಮಾರ್, ಆರ್. ನಾಗರಾಜು, ಕೌನ್ಸಿಲ್ ಕಾರ್ಯದರ್ಶಿ ನೂರುದ್ದೀನ್ ಷರೀಫ್, ಅಧಿಕಾರಿಗಳಾದ ಕೃಷ್ಣ, ವೆಂಕಟೇಶ್, ಜಯರಾಮ್, ರಾಜಗೋಪಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement