ರಸ್ತೆಬದಿ ವ್ಯಾಪಾರಿಗಳ ಸಮಿತಿ ರಚನೆಗೆ ಚಿಂತನೆ
ಎಚ್.ಡಿ. ಕೋಟೆ: ಪಟ್ಟಣದ ಸ್ವಯಂ ಸೇವಾ ಸಂಸ್ಥೆ ಮೂಲಕ ಪಟ್ಟಣದಲ್ಲಿ ರಸ್ತೆಬದಿ ವ್ಯಾಪಾರಿಗಳ ಸಮಿತಿ ರಚಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಎನ್.ವಿಜಯಕುಮಾರ್ ತಿಳಿಸಿದರು.
ಪಟ್ಟಣದ ಪಪಂ ಆವರಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ನಗರ ಬೀದಿ ವ್ಯಾಪಾರಿಗಳ ಕಾಯ್ದೆ- 2009ರ ಬಡತನ ನಿರ್ಮೂಲನ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಮಿತಿಯನ್ನು (ಟೌನ್ ವೆಂಡಿಂಗ್ ಸಮಿತಿ) ರಚಿಸುವ ಬಗ್ಗೆ ಕರೆಯಲಾಗಿದ್ದ ಸಲಹಾ ಸೂಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸಮಿತಿಯ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಇರುತ್ತಾರೆ. ಸಬ್ ಇನ್ಸ್‌ಪೆಕ್ಟರ್, ತಾಲೂಕು ಆರೋಗ್ಯಾಧಿಕಾರಿ, ಎಲ್ಲ ಬ್ಯಾಂಕಿನ ವ್ಯವಸ್ಥಾಪಕರು, ಸಮಾಜ ಕಲ್ಯಾಣಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಸಮಿತಿ ರಚನೆಯಾದ ಬಳಿಕ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಏನಾದರೂ ತೊಂದರೆಗಳಾದರೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಒದಗಿಸಲಿದ್ದಾರೆ ಎಂದರು. ಅಗತ್ಯಬಿದ್ದಲ್ಲಿ ಅವರಿಂದ ಸಲಹೆ ಸೂಚನೆಗಳನ್ನು ಪಡೆಯಬಹುದಾಗಿದೆ. ಉದಾಹರಣೆಗೆ ಆರೋಗ್ಯದಲ್ಲೇನಾದರೂ ಏರುಪೇರಾದರೆ ವೈದ್ಯಾಧಿಕಾರಿಯೊಂದಿಗೆ, ಬ್ಯಾಂಕ್ ವ್ಯವಹಾರದಲ್ಲಿ ಏನಾದರೂ ತೊಂದರೆಯಾದರೆ ಬ್ಯಾಂಕ್ ವ್ಯವಸ್ಥಾಪಕರೊಡನೆ ಚರ್ಚಿಸಿ ಸೂಕ್ತ ಮಾರ್ಗೋಪಾಯಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಅರಿವು ಮೂಡಿಸಬೇಕಿದೆ: ಪಟ್ಟಣ ಪ್ರದೇಶದಲ್ಲಿ ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಟೌನ್‌ನಲ್ಲಿ ವಾಸ ಮಾಡುವ ಬಹುಪಾಲು ಬಡಜನರು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅವರಿಂದ ಶುಚಿತ್ವವಿಲ್ಲದೇ ಪಟ್ಟಣ ಅನೈರ್ಮಲ್ಯದಿಂದಲೂ ಕೂಡಿದೆ. ಅವರಿಗೆ ಶುಚಿತ್ವದ ಬಗ್ಗೆ ಅರಿವು ಮೂಡಿಸಬಹುದಾಗಿದೆ. ಅಲ್ಲದೇ ಸಮಿತಿಯ ಮುಖಾಂತರ ವ್ಯಾಪಾರಕ್ಕೆ ಅನುಕೂಲವಾಗುವಂತೆ ಬ್ಯಾಂಕ್‌ಗಳ ಮೂಲಕ ಸಾಲ ಒದಗಿಸಲಾಗುವುದು. ಒದಗಿಸಿದ ಸಾಲದಲ್ಲಿ ಶೇ.25 ರಷ್ಟನ್ನು ಪಪಂ ನೀಡುವುದು, ಉಳಿದ ಶೇ.75 ರಷ್ಟು ಹಣವನ್ನಷ್ಟೇ ಪಾವತಿ ಮಾಡಬೇಕು ಎಂದರು.
ಪಪಂ ಸಂಘಟನಾ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಪಟ್ಟಣ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದೆ. ಈ ಯೋಜನೆಯನ್ನು ಸೂಕ್ತವಾಗಿ ಬಳಸಿಕೊಂಡು ಉನ್ನತೀಕರಣದತ್ತ ಸಾಗುವುದು ಒಳಿತು ಎಂದು ಸಲಹೆ ನೀಡಿದರು. ಪಪಂ ಅಧ್ಯಕ್ಷ ಉಮಾಶಂಕರ್, ಸದಸ್ಯರಾದ ರಾಜಣ್ಣ, ಎಲ್.ಅನಿಲ್, ಶ್ರೀನಿವಾಸ್, ನಾಗರಾಜು ಇದ್ದರು.