ಜನಾನುರಾಗಿ ಕೆಲಸ ಮಾಡಿದ ಒಡೆಯರ್
ಮೈಸೂರು: ದೇಶದ ಇತರೆ ರಾಜರಿಗಿಂತ ಮೈಸೂರಿನ ಯದುವಂಶದ ಒಡೆಯರ್‌ಗಳು ಜನಾನುರಾಗಿಯಾಗಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಪಾತಿ ಫೌಂಡೇಷನ್ ಶನಿವಾರ ಆಯೋಜಿಸಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 130ನೇ ವರ್ಧಂತಿಯ ಅಭಿಮಾನದ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯದುವಂಶದ ಒಡೆಯರ್‌ಗಳು ಸಾಕಷ್ಟು ಜನಾನುರಾಗಿ ಕೆಲಸ ಮಾಡಿದ್ದಾರೆ. ಅವರಷ್ಟು ಜನಾನುರಾಗಿಯಾಗಿ ಇತರ ರಾಜರು ಇರಲಿಲ್ಲ. ಮೈಸೂರು ಸಂಸ್ಥಾನದ ಎಲ್ಲಾ ರಾಜರು, ದಿವಾನರ ಬಗ್ಗೆ ತಿಳಿದುಕೊಂಡಿದ್ದೇನೆ. ಕೆಲವರು ಸರ್.ಎಂ.ವಿಶ್ವೇಶ್ವರಯ್ಯ ಅವರನ್ನು ಸಂಬಳಕ್ಕೆ ಕೆಲಸ ಮಾಡಿದರು ಎನ್ನುತ್ತಾರೆ. ಏನೆ ಆದರೂ ಅವರು ಮಾಡಿದ್ದು ಅಭಿವೃದ್ಧಿಯ ಕೆಲಸ ಎಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಗೌರವ ಸಲ್ಲುವಂತೆ ವಿಶ್ವೇಶ್ವರಯ್ಯ ಅವರಿಗೂ ಸಲ್ಲಬೇಕು. ಮೈಸೂರು ವಿವಿಗೆ ನೂರು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನು ವಿವಿಯಲ್ಲಿ ಪ್ರತಿಷ್ಠಾಪಿಸಬೇಕು ಎಂದು ಹೇಳಿದರು. ಆರ್‌ಎಸ್‌ಎಸ್ ಸಂಚಾಲಕ ಮಾ.ವೆಂಕಟರಾಮ್, ಮಧುಮೇಹ ತಜ್ಞ ಡಾ.ಲಕ್ಷ್ಮೀನಾರಾಯಣ, ಮ್ಯಾಂಡೋಲಿನ್ ವಾದಕ ಜಾನಕಿರಾಂ ರಾಜು, ಗಮಕ ವಾಚಕಿ ವಸಂತ, ಕಲಾವಿದೆ ಗೌರಿ, ಜನತಾ ಏಜೆನ್ಸಿ ಮಾಲೀಕ ಜಿನೇಶ್ ಅವರನ್ನು ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್, ಬ್ರಾಹ್ಮಣ ಸಮಾಜದ ಮುಖಂಡರಾದ ನಟರಾಜ ಜೋಯಿಸ್, ಕೆ.ರಘುರಾಂ, ಜೂನಿಯರ್ ವಿಷ್ಣುವರ್ಧನ್ ರಾಜು, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶಸ್ವಿ ಸೋಮಶೇಖರ್, ಫೌಂಡೇಷನ್ ಅಧ್ಯಕ್ಷ ಎಂ.ಡಿ. ಪಾರ್ಥಸಾರಥಿ ಇದ್ದರು.