ಔಷಧೀಯ ಸಸ್ಯಗಳ ಸಂರಕ್ಷಣೆ ಸವಾಲು
ಮೈಸೂರು: ಇಂದು ನಶಿಸುತ್ತಿರುವ ಔಷಧೀಯ ಸಸ್ಯ ಸಂಪತ್ತುಗಳನ್ನು ಸಂರಕ್ಷಿಸುವುದು ದೊಡ್ಡ ಸವಾಲು ಎಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಡಾ.ಎನ್.ಎ.ಮಧ್ಯಸ್ಥ ಹೇಳಿದರು.
ಚಾಮರಾಜೇಂದ್ರ ಮೃಗಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಹದಿಮೂರನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ವಿಶೇಷ ಸುಧಾರಣೆ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಪಶ್ಚಿಮ ಘಟ್ಟದಲ್ಲಿ ಅಪರೂಪದ ಸಸ್ಯವರ್ಗ ಹಾಗೂ ಜೀವ ವೈವಿಧ್ಯವಿದೆ. ಆದರೆ ಇದನ್ನು ಯಾರು ಗಂಭೀರವಾಗಿ ಪರಿಗಣಿಸಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಇದಕ್ಕೆ ಕಾರಣ. ಇದರ ಸುಧಾರಣೆಗೆ 2002 ರಲ್ಲಿ ಜೀವವೈವಿಧ್ಯ ಕಾಯ್ದೆ ಜಾರಿಗೆ ತಂದರೂ ಪ್ರಯೋಜನವಾಗಿಲ್ಲ. ಭಾರತೀಯ ಔಷಧ ಸಸ್ಯಗಳನ್ನು ವಿದೇಶಿಗರು ಪೇಟೆಂಟ್ ಪಡೆದು ಹಣ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂಪತ್ತಿನ ಸಂರಕ್ಷಣೆಗೆ ತಜ್ಞರ ಕೊರತೆಯೂ ಇದೆ. ಆದ್ದರಿಂದ ಇದರ ಸಂರಕ್ಷಣೆ ದೊಡ್ಡ ಸವಾಲು ಎಂದರು.
ವಿಶ್ವದ ಪ್ರಮುಖ ಸಸ್ಯಾಭಿವೃದ್ಧಿ ಕೇಂದ್ರವೂ ಆಗಿರುವ ಪಶ್ಚಿಮ ಘಟ್ಟವು ಭೂಮಿಯ ಭವಿಷ್ಯತ್ತಿನ ವಿಮೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದ ಏಜೆನ್ಸಿಗಳು ಹಣಹೂಡಿ ಸಂರಕ್ಷಣೆಗೆ ಮುಂದಾಗಿವೆ. ಏಡ್ಸ್ ಹಾಗೂ ಕ್ಯಾನ್ಸರ್ ಸೇರಿದಂತೆ ಜಗತ್ತಿನ ವಿವಿಧ ರೋಗಗಳಿಗೆ ಇಲ್ಲಿರುವ ಔಷಧೀಯ ಸಸ್ಯಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆ ಪ್ರಯೋಜನವಿಲ್ಲ: ವರದಿಯ ಪ್ರಕಾರ 2030ರ ವೇಳೆಗೆ ಪಶ್ಚಿಮ ಘಟ್ಟದ ಹವಾಮಾನ 1 ಡಿಗ್ರಿ ಆಗಲಿದೆ. ಇದರಿಂದ ಮಳೆ ಜಾಸ್ತಿಯಾಗಿ ಪ್ರವಾಹ ಉಂಟಾಗಲಿದೆ. ಅಲ್ಲದೆ ಮಳೆ ಆಗದಿರುವ ದಿನಗಳು ಸಹ ಸೃಷ್ಟಿಯಾಗಲಿದೆ. ಆದ್ದರಿಂದ ಪಶ್ಚಿಮ ಘಟ್ಟದಲ್ಲಿ ಹರಿಯುವ ನೀರು ಉಪಯೋಗಿಸಿಕೊಳ್ಳಲು ರೂಪಿಸುತ್ತಿರುವ ಎತ್ತಿನ ಹೊಳೆ ಯೋಜನೆ ಪ್ರಯೋಜವಾಗಲಾರದು ಎಂದರು. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಇದ್ದರು.