ಬಯಲುರಂಗ ಮಂದಿರ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮೈಸೂರು: ಚಾಮರಾಜ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ಗೋಕುಲಂನ ಡಾಕ್ಟರ್ ಕಾರ್ನರ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಬಯಲುರಂಗ ಮಂದಿರ ಹಾಗೂ ಒಂಟಿಕೊಪ್ಪಲ್ ವಾಲ್ಮೀಕಿ ರಸ್ತೆಯ ವಿಸ್ತರಣೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಮಂಗಳವಾರ ಗುದ್ದಲಿ ಪೂಜೆ ನಡೆಸಿದರು.
ಶಾಸಕ ವಾಸು, ಮೇಯರ್ ಎನ್.ಎಂ. ರಾಜೇಶ್ವರಿ, ನಗರ ಪಾಲಿಕೆ ಸದಸ್ಯರಾದ ಸಿ. ಮಹದೇಶ್, ಎಂ.ಜೆ. ರವಿಕುಮಾರ್, ಶಿವಮಾದು, ಟಿ. ಗಿರೀಶ್ ಪ್ರಸಾದ್, ಪ್ರಶಾಂತ ಗೌಡ, ಎಂ. ರಮೇಶ್, ಭಾಗ್ಯವತಿ ಸುಬ್ರಹ್ಮಣ್ಯ, ಎಂಡಿಎ ಎಂಜಿನಿಯರಗಳಾದ ರಾಜಶೇಖರ್, ಮಹಂತೇಶ್, ಎಂ. ಜೋಷಿ, ವಿಶ್ವ ಮಾನವ ವಿದ್ಯಾರ್ಥಿ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಜೆ. ಸುರೇಶ್‌ಗೌಡ, ನವಭಾರತ್ ನಿರ್ಮಾಣ ವೇದಿಕೆಯ ಅಧ್ಯಕ್ಷ ಕೆ.ವಿ. ಶ್ರೀಧರ್ ಮುಂತಾದವರು ಇದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಎರಡು ಕಾಮಗಾರಿ ಕೈಗೊಳ್ಳಲಾಗಿದ್ದು, ಗೋಕುಲಂನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಯಲು ರಂಗಮಂದಿರವು 43,253 ಚದುರಡಿಯಾಗಿದ್ದು, ಇದರ ನಿರ್ಮಾಣದ ಅಂದಾಜು ಮೊತ್ತ 1.13 ಕೋಟಿ ರು. ಆಗಿದೆ. 250 ಆಸನಗಳು, ವೇದಿಕೆ ಹಾಗೂ ಗ್ರೀನ್ ರೂಂ ಒಳಗೊಂಡಂತೆ ಎಲ್ಲಾ ರೀತಿಯ ಮೂಲಸೌಲಭ್ಯವನ್ನು ಒಳಗೊಂಡಿದೆ.
ಒಂಟಿಕೊಪ್ಪಲಿನ ವಾಲ್ಮೀಕಿ ರಸ್ತೆಯನ್ನು 11 ಮೀಟರ್ ವಿಸ್ತರಣೆ ನಡೆದಿದ್ದು, ಇದರ ಅಂದಾಜು ಕಾಮಗಾರಿ ವೆಚ್ಚವು 1. 27 ಕೋಟಿ ರು. ಆಗಿದೆ. ಹುಣಸೂರು ರಸ್ತೆಯ ಜೆಂಕ್ಷನ್‌ನಿಂದ ಕೆಆರ್‌ಎಸ್ ರಸ್ತೆ ಜೆಂಕ್ಷನ್‌ವರೆಗೆ 1.1 ಕಿ.ಮೀ. ವಿಸ್ತರಣೆ ಕಾರ್ಯ ನಡೆದಿದ್ದು, ಮರಗಳನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡುವ ಯೋಜನೆ ರೂಪಿಸಲಾಗಿದೆ.