ಹಕ್ಕುಪತ್ರಕ್ಕೆ ಆಗ್ರಹಿಸಿ ಆದಿವಾಸಿಗಳ ಪ್ರತಿಭಟನೆ
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಪುನರ್ವಸತಿಗೊಂಡು ನಾಗಾಪುರ ಗಿರಿಜನ ಹಾಡಿಯಲ್ಲಿ ವಾಸ ಮಾಡುವ ಕುಟುಂಬಗಳಿಗೆ ಇನ್ನೆರಡು ತಿಂಗಳಲ್ಲಿ ಹಕ್ಕುಪತ್ರ ನೀಡದಿದ್ದಲ್ಲಿ ನಾಗರಹೊಳೆ ಮುಖ್ಯರಸ್ತೆ ಬಂದ್ ಮಾಡಿ, ಗಜಪಯಣಕ್ಕೆ ಬಹಿಷ್ಕಾರ ಹಾಕುವುದಾಗಿ ಕರ್ನಾಟಕ ಆದಿವಾಸಿಗಳ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ.
ಭೂ ಒಡೆತನದ ಹಕ್ಕು ಪತ್ರ ನೀಡದೆ 15 ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದು ಆರೋಪಿಸಿ, ಮಂಗಳವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆದಿವಾಸಿಗಳು ಪ್ರತಿಭಟನೆ ನಡೆಸಿದರು.
ನಂತರ ಮುಖಂಡ ಜೆ.ಕೆ. ತಿಮ್ಮ ಮಾತನಾಡಿ, ನಾಗರಹೊಳೆಯಿಂದ ಎಲ್ಲ ಸವಲತ್ತು ನೀಡುವ ಭರವಸೆಯೊಂದಿಗೆ ಹೊರ ಕರೆತಂದ ನಮ್ಮನ್ನು ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಿಂದ ಹೊರಹಾಕಿದ್ದಾರೆ ಎಂದು ದೂರಿದರು. ಗಿರಿಜನರು ಬ್ಯಾಂಕ್ಗಳಲ್ಲಿ ಸಾಲ, ಮತ್ತಿತರ ಇಲಾಖೆಗಳಿಂದ ಸಹಾಯಧನ, ಸೌಲಭ್ಯ ಪಡೆಯಲು ಹರಸಾಹಸ ಪಡಬೇಕಿದೆಯೆಂದು ಆರೋಪಿಸಿದರು. ನಾಗಾಪುರ 6 ಹಾಡಿಗಳಲ್ಲಿ ವಾಸವಿರುವ ಎಲ್ಲ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಬೇಕು, ಮೂಲ ಸೌಕರ್ಯ ಕಲ್ಪಿಸಿ ಸೂರಿಲ್ಲದವರಿಗೆ ವಾಸಕ್ಕೆ ಯೋಗ್ಯವಾದ ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದ್ದರು. ನಂತರ ಉಪವಿಭಾಗಾಧಿಕಾರಿ ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು. ಸಮಿತಿಯ ರಾಜ್ಯ ಸಂಚಾಲಕ ಗಣೇಶ್, ಸಹ ಸಂಚಾಲಕ ವಿ. ಬಸವರಾಜು ಕಲ್ಕುಣಿಕೆ, ತಾಲೂಕು ಅಧ್ಯಕ್ಷ ಜೆ.ಕೆ. ಮಣಿ ಇದ್ದರು.